ಹೇಸ್ಟಿಂಗ್ಸ್ (ನ್ಯೂಜಿಲೆಂಡ್): ಹಾಕ್ ಕಪ್ ಹಾಕಿ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಸೋಲು ಅನುಭವಿಸಿದೆ. ಬಲಿಷ್ಠ ಚೀನಾ ತಂಡದ ವಿರುದ್ಧ ಸೆಣಸಿದ್ದ
ಭಾರತೀಯರು 2-1 ಗೋಲುಗಳ ಅಂತರದಲ್ಲಿ ಪರಾಭವ ಹೊಂದಿದರು.
ಎಂಟು ರಾಷ್ಟ್ರಗಳು ಪಾಲ್ಗೊಂಡಿರುವ ಈ ಟೂರ್ನಿಯಲ್ಲಿ ಜಯದ ಮೂಲಕ ತನ್ನ ಅಭಿಯಾನ ಆರಂಭಿಸುವ ಉದ್ದೇಶ ಹೊಂದಿದ್ದ ಭಾರತ ತಂಡಕ್ಕೆ ಆಸೆ ಕೈಗೂಡಲಿಲ್ಲ. ಹೇಸ್ಟಿಂಗ್ಸ್ ಸ್ಪೋಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 31ನೇ ನಿಮಿಷದಲ್ಲಿ ಭಾರತದ ಅನುರಾಧಾ ಠಾಕೂರ್ ಗೋಲು ಗಳಿಸಿಕೊಟ್ಟರು. ಈ ಮೂಲಕ, ಭಾರತ ವನಿತೆಯರು ಚೀನೀ ವನಿತೆಯರಿಗಿಂತ 1-0ರ ಮುನ್ನಡೆ ಪಡೆದುಕೊಂಡರು.
ಆದರೆ, ಮುಂದಿನ ಎರಡೇ ನಿಮಿಷಗಳಲ್ಲಿ ಚೀನಾ ತಂಡ ಭಾರತದ ಪ್ರಾಬಲ್ಯವನ್ನು ಮುರಿಯಿತು. 34ನೇ ನಿಮಿಷದಲ್ಲಿ ತಮಗೆ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಗ್ಯು ವಾಂಗ್ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಚೀನಾವೂ ತನ್ನ ಮೊದಲ ಗೋಲು ದಾಖಲಿಸಿತು. ಇದರಿಂದ ಎಚ್ಚೆತ್ತ ಭಾರತೀಯರು ಮಿಂಚಿನ ಆಟ ತೋರಿದರಾದರೂ ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಚೀನಾ ಪರ 38ನೇ ನಿಮಿಷದಲ್ಲಿ ಕ್ವಿಯಾನ್ ಯು ಅವರು ದಾಖಲಿಸಿದ ಗೋಲು ಭಾರತಕ್ಕೆ ಮತ್ತೊಂದು ಪೆಟ್ಟು ಕೊಟ್ಟಿತು. ಇದಾದ ಮೇಲೆ, ಭಾರತ ಗೋಲು ಗಳಿಸಲು ಶತಪ್ರಯತ್ನ ನಡೆಸಿತಾದರೂ ಅದು ಫಲ ನೀಡಲಿಲ್ಲ. ಅಂತಿಮವಾಗಿ, ಭಾರತ ವನಿತೆಯರು ಚೀನೀ ವನಿತೆಯರಿಗೆ 1-2 ಗೋಲುಗಳಿಂದ ಮಣಿದರು. ಭಾನುವಾರ ನಡೆಯಲಿರುವ ತಮ್ಮ ಮುಂದಿನ ಪಂದ್ಯದಲ್ಲಿ ಭಾರತ ವನಿತೆಯರು, ಅಮೆರಿಕ ತಂಡವನ್ನು ಎದುರಿಸಲಿದ್ದಾರೆ.