ನವದೆಹಲಿ: ಐಪಿಎಲ್ ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿ ಅಂತಿಮ ಹಂತದಲ್ಲಿ ಎಡವಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಈ ಬಾರಿ ಟ್ರೋಫಿ ಗೆದ್ದೇ ತೀರುವ ಛಲದೊಂದಿಗೆ ಮತ್ತೆ ಕಣಕ್ಕಿಳಿದಿದೆ. ತಂಡದ ಸಹ ಮಾಲೀಕರಾಗಿರುವ ಪ್ರೀತಿ ಜಿಂಟಾ ಸಹ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮೊದಲ ಬಾರಿಗೆ ಐಪಿಎಲ್ ಫೈನಲ್ ಸುತ್ತಿಗೆ ಪ್ರವೇಶಿಸಿತ್ತು. ಆದರೆ ಪ್ರಶಸ್ತಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗೆಲವು ದಾಖಲಿಸುವಲ್ಲಿ ವಿಫಲವಾಗಿ ನಿರಾಸೆ ಅನುಭವಿಸಿತ್ತು. ಆ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಷ್ಟ ಅನುಭವಿಸುತ್ತಿದ್ದು, ತಂಡವನ್ನು ಮಾರಾಟ ಮಾಡುವತ್ತ ಮಾಲೀಕರು ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ವೆಬ್‍ಸೈಟ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ಈ ಮಾತನ್ನು ತಿರಸ್ಕರಿಸಿದ್ದಾರೆ. ಇದು ಕೇವಲ ವದಂತಿ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ತಂಡದಿಂದ ಲಾಭ ಮಾಡುತ್ತಿದ್ದೇವೆ. ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸವಿದೆ ಎಂದು ತಿಳಿಸಿದರು. ಈ ವೇಳೆ ಕಾಂಡೊಮ್ ಕಂಪನಿಯ ಲೋಗೊವನ್ನು ತಂಡದ ಜೆರ್ಸಿ ಮೇಲೆ ಹಾಕಿಕೊಳ್ಳಲು ಕೆಲ ಕ್ರಿಕೆಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ವರದಿಯನ್ನು ಪ್ರೀತಿ ಜಿಂಟಾ ತಳ್ಳಿ ಹಾಕಿದರು.
ಲೀಗ್‍ನಲ್ಲಿ ಇತರೆ ತಂಡಗಳು ಸಹ ಈ ರೀತಿಯಾದ ಜಾಹಿರಾತನ್ನು ಹೊಂದಿವೆ. ಈ ವರದಿ ಬಂದಾಗ ಸ್ವತಃ ಆಟಗಾರರೇ ಅಚ್ಚರಿಯಾದರು. ಫ್ರಾಂಚೈಸಿಯಾಗಿ ಈ ರೀತಿಯಾದ ಅವಕಾಶವನ್ನು ಬಳಸಿಕೊಂಡು ಯುವ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತೇವೆ ಎಂದರು. ಈ ಬಾರಿ ತಂಡ ತಮ್ಮ ಗುರಿಯನ್ನು ತಲುಪಲಿದೆ. ಪ್ರತಿಭಾನ್ವಿತ ಆಟಗಾರರು ತಂಡದಲ್ಲಿದ್ದು, ಪ್ರಶಸ್ತಿ ಎತ್ತಿ ಹಿಡಿಯುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.