ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಗ್ರಶ್ರೇಯಾಂಕಗಳು ಭಾರತೀಯ ಮಹಿಳೆಯರ ಸಾಧನೆಯನ್ನು ಬಿಂಬಿಸಿವೆ

ಬ್ಯಾಡ್ಮಿಂಟನ್ ಹಾಗೂ ಟೆನಿಸ್ ರ್ಯಾಂಕಿಂಗ್‍ನಲ್ಲಿ ಭಾರತದ ಇಬ್ಬರು ಮಹಿಳಾ ಕ್ರೀಡಾಪಟುಗಳು ಅಗ್ರ ಶ್ರೇಯಾಂಕ ಗಳಿಸಿರುವುದು ಭಾರತೀಯ..

ಸೈನಾ ನೆಹ್ವಾಲ್
Srinivasa Murthy VN
Updated On : 20 Apr 2015, 9:28 am

ಹೈದರಾಬಾದ್: `ಬ್ಯಾಡ್ಮಿಂಟನ್ ಹಾಗೂ ಟೆನಿಸ್ ರ್ಯಾಂಕಿಂಗ್‍ನಲ್ಲಿ ಭಾರತದ ಇಬ್ಬರು ಮಹಿಳಾ ಕ್ರೀಡಾಪಟುಗಳು ಅಗ್ರ ಶ್ರೇಯಾಂಕ ಗಳಿಸಿರುವುದು ಭಾರತೀಯ ಮಹಿಳೆಯರು
ಅಂತಾರಾಷ್ಟ್ರೀಯ ಕ್ರೀಡಾಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ತೋರಿಸುತ್ತದೆ' ವಿಶ್ವ ಬ್ಯಾಡ್ಮಿಂಟನ್ ರ್ಯಾಕಿಂಗ್‍ನಲ್ಲಿ ಇತ್ತೀಚೆಗಷ್ಟೇ  ನಂಬರ್‍ಒನ್ ಸ್ಥಾನಕ್ಕೇರಿದ ಸೈನಾ ನೆಹ್ವಾಲ್ ಅವರ ಮಾತುಗಳಿವು.

ಬ್ಯಾಡ್ಮಿಂಟನ್‍ನಲ್ಲಿ ತಾವು ನಂಬರ್‍ಒನ್ ಸ್ಥಾನಕ್ಕೇರಿದ್ದು ಹಾಗೂ ಟೆನಿಸ್ ಡಬಲ್ಸ್ ರ್ಯಾಂಕಿಂಗ್‍ನಲ್ಲಿ ಸಾನಿಯಾ ಮಿರ್ಜಾ ಸಹ ನಂಬರ್‍ಒನ್ ಪಟ್ಟಕ್ಕೇರಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಹೀಗೆ ಹೇಳಿದರು. ಇಷ್ಟೇ ಅಲ್ಲದೆ, ಜಾಗತಿಕ ಕ್ರೀಡಾಕ್ಷೇತ್ರದಲ್ಲಿ ಭಾರತೀಯ ಮಹಿಳೆಯರು ಅನನ್ಯ ಸಾಧನೆಗೈಯ್ಯುತ್ತಿದ್ದಾರೆ ಎಂದ ಅವರು, ಮೇರಿ ಕೋಮ್, ಕೃಷ್ಣಾ ಪೂನಿಯಾ, ಗೀತಾ ಫೋಗಟ್, ಬಬಿತಾ ಕುಮಾರಿ, ಹೀನಾ ಸಿಧು ಸಹ ಉತ್ತಮ ಸಾಧನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಮಹಿಳೆಯರ ಸಾಧನೆಗಳೂ ಸಹ ಹೆಚ್ಚು ಪ್ರಚಾರ ಪಡೆಯುತ್ತಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದರು. ತಮ್ಮ ವೈಯಕ್ತಿಕ ಸಾಧನೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, `ನಂಬರ್‍ಒನ್ ಪಟ್ಟಕ್ಕೇರಿರುವುದು ಹೆಮ್ಮೆ ತಂದಿದೆ. ಅಗ್ರ ಸ್ಥಾನಕ್ಕೇರುವ ಹಾದಿ ತೀರಾ ಕಷ್ಟಕರವಾದದ್ದು. 2010ರಲ್ಲಿ 2ನೇ ಶ್ರೇಯಾಂಕ ಗಳಿಸಿದ ಬಳಿಕ ನಂಬರ್‍ಒನ್ ಪಟ್ಟಕ್ಕೇರುವ ನನ್ನ ಕನಸು ಈಡೇರಲು ಐದು ವರ್ಷ ಬೇಕಾಯಿತು' ಎಂದರು.

ಚೀನಾದಲ್ಲಿ ಉನ್ನತಮಟ್ಟದ ತರಬೇತಿ: ಬ್ಯಾಡ್ಮಿಂಟನ್‍ನಲ್ಲಿ ಚೀನೀಯರ ಪ್ರಾಬಲ್ಯ ಸಾ„ಸುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, `ಚೀನಾದಲ್ಲಿ ಪ್ರತಿಯೊಂದು ಕ್ರೀಡಾಪಟುವೂ ವಿಶೇಷ ಸೌಲಭ್ಯಗಳಡಿ, ಶ್ರೇಷ್ಠ ಕೋಚ್ ಗಳ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗುತ್ತದೆ. ಅಲ್ಲಿನ ಮೂಲಸೌಕರ್ಯ, ತರಬೇತುದಾರರಿಗೆ ಹೋಲಿಸಿದರೆ ಭಾರತದಲ್ಲಿ ನೀಡಲಾಗುತ್ತಿರುವ ತರಬೇತಿ ಆ ಮಟ್ಟದಲ್ಲಿಲ್ಲ ಎನ್ನಲಡ್ಡಿಯಿಲ್ಲ. ಅದರಲ್ಲೂ ನಮ್ಮಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಕ್ರೀಡಾಳುಗಳ ಸಂಖ್ಯೆಯೂ ಕಡಿಮೆಯಿದೆ. ಹಾಗೆಂದು ಭಾರತದಲ್ಲಿ ಉತ್ತಮ ತರಬೇತಿ ಕೇಂದ್ರಗಳಿಲ್ಲ ಎಂದಲ್ಲ.

ನಮ್ಮಲ್ಲೂ ಉತ್ತಮ ಕೋಚ್‍ಗಳಿದ್ದಾರೆ. ಆದರೆ, ಬ್ಯಾಡ್ಮಿಂಟನ್‍ನಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಭಾರತದಲ್ಲಿ ಕಡಿಮೆಯಿದೆ' ಎಂದರು. ತಮ್ಮ ಯಶಸ್ಸಿಗೆ ತಮ್ಮ ಮಾಜಿ ಗುರು ಪುಲ್ಲೇಲ
ಗೋಪಿಚಂದ್ ಹಾಗೂ ಹಾಲಿ ಕೋಚ್ ವಿಮಲ್ ಕುಮಾರ್  ಅವರಿಗೆ ಕೃತಜ್ಞತೆ ಸಲ್ಲಿಸುವುದನ್ನು ಅವರು ಮರೆಯಲಿಲ್ಲ. ತಮ್ಮ ಮುಂದಿನ ವೃತ್ತಿಜೀವನದ ಯೋಜನೆಗಳ ಬಗ್ಗೆ ಹೇಳಿಕೊಂಡ ಅವರು, `ಈ ವರ್ಷ ಸಾಕಷ್ಟು ಪಂದ್ಯಾವಳಿಗಳಲ್ಲಿ ಆಡಬೇಕಿದೆ. ಇವೆಲ್ಲದರಲ್ಲಿ ಉತ್ತಮ ಪ್ರದರ್ಶನ ನೀಡಿ, ಮುಂದಿನ ವರ್ಷದ ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಗೆಲ್ಲುವ ಇರಾದೆಯಿದೆ' ಎಂದರು.

ವಿಶ್ವ ಟೆನಿಸ್‍ನಲ್ಲಿ ಸಾನಿಯಾ ಹೆಸರಾಂತ ಆಟಗಾರ್ತಿ. ಇದೀಗ ಡಬಲ್ಸ್‍ನಲ್ಲಿ ಅವರು ನಂಬರ್‍ಒನ್ ಪಟ್ಟಕ್ಕೇರಿರುವುದು ಹೆಮ್ಮೆ ಪಡುವಂಥದ್ದು. ಅವರ ಮುಂದಿನ ವೃತ್ತಿಜೀವನಕ್ಕೆ ಶುಭವಾಗಲಿ ಎಂದು ಹಾರೈಸುತ್ತೇನೆ.
-ಸೈನಾ ನೆಹ್ವಾಲ್
ಭಾರತ ಬ್ಯಾಡ್ಮಿಂಟನ್ ಆಟಗಾರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement