ಸ್ಟಟ್‍ಗರ್ಟ್ (ಜರ್ಮನಿ): ಮಹಿಳೆಯರ ಡಬಲ್ಸ್‍ನ ಅಗ್ರಶ್ರೇಯಾಂಕಿತರಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿಯ ಜೈತ್ರಯಾತ್ರೆಗೆ ಬ್ರೇಕ್ ಬಿದ್ದಿದೆ.
ಗುರುವಾರ ನಡೆದ ಪೊರ್ಶ್ ಗ್ರ್ಯಾನ್ ಪ್ರೀ ಟೆನಿಸ್ ಚಾಂಪಿಯನ್‍ಶಿಪ್‍ನ ಮೊದಲ ಸುತ್ತಿನ ಪಂದ್ಯದಲ್ಲಿ ಕ್ರೊವೇಷಿಯಾದ ಪೇತ್ರಾ ಮಾರ್ಟಿಕ್ ಹಾಗೂ ಲೀಚ್‍ಟೆನ್ ಸ್ಟೇನ್‍ನ ಸ್ಟೆಫನಿ ವಾಗ್ಟ್ ವಿರುದ್ಧ ಸೆಣಸಿದ ಭಾರತ-ಸ್ವಿಜರ್ಲೆಂಡ್‍ನ ಜೋಡಿ, 6-3, 6-3 ನೇರ ಸೆಟ್ ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಪಂದ್ಯದ ವೇಳೆ, ಮಾರ್ಟಿನಾ ಹಿಂಗಿಸ್ ಅವರು ಫಿಟ್ನೆಸ್
ಸಮಸ್ಯೆಗೆ ಒಳಗಾಗಿದ್ದು ಸೋಲಿಗೆ ಪ್ರಮಖ ಕಾರಣ.
ಬೆನ್ನುನೋವಿನಿಂದ ಬಳಲಿದ ಅವರ ಆಟದಲ್ಲಿ ಎಂದಿನ ಚುರುಕುತನ ಮಾಯವಾಗಿತ್ತು. ಇದು ಇಬ್ಬರ ಹೊಂದಾಣಿಕೆಯ ಮೇಲೆ ಪರಿಣಾಮ ಬೀರಿತು. ಇದರ ಲಾಭ ಪಡೆದ, ಪೇತ್ರ-ಸ್ಟೆಫನಿ ಚುರುಕಿನ ಆಟ ಪ್ರದರ್ಶಿಸಿ ಪಂದ್ಯದಲ್ಲಿ ಜಯಶಾಲಿಯಾದರು. ಸಾನಿಯಾ-ಮಾರ್ಟಿನಾ ಈ ಪಂದ್ಯಾವಳಿಗೂ ಮುನ್ನ ಸತತ ಮೂರು ಪಂದ್ಯಾವಳಿಗಳಲ್ಲಿ (ಇಂಡಿಯನ್ ವೆಲ್ಸ್, ಮಿಯಾಮಿ ಹಾಗೂ ಚಾರ್ಲೆಸ್ಟನ್) ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಮಧ್ಯೆ ವಿಶ್ವ ಮಹಿಳೆಯರ ಡಬಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಸಾನಿಯಾಗೆ ಈ ಸೋಲು ಭಾರಿ ಆಘಾತ ಉಂಟುಮಾಡಿತು.
ಲಿಯಾಂಡರ್-ನೆಸ್ಟರ್ ಜೋಡಿಗೆ ಸೋಲು
ಭಾರತದ ಲಿಯಾಂಡರ್ ಪೇಸ್ ಹಾಗೂ ಕೆನಡಾದ ಡೇನಿಯಲ್ ನೆಸ್ಟರ್ , ಬಾರ್ಸಿಲೋನಾ ಓಪನ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಸೋಲುಂಡಿದ್ದಾರೆ. ಬುಧವಾರ
ನಡೆದ ಪಂದ್ಯದಲ್ಲಿ ಪೇಸ್-ನೆಸ್ಟರ್, ಸ್ಪೇನ್‍ನ ಟಾಮಿ ರಾಬ್ರೆಡೊ ಹಾಗೂ ಡೇವಿಡ್ ಮೆರೆರೊ ವಿರುದ್ಧ 5-7, 2-6ರಿಂದ ಸೋತರು.