ಕ್ರೀಡೆ

ಮತ್ತೆ ವಿವಾದದಲ್ಲಿ ಶ್ರೀನಿವಾಸನ್

Shilpa D

ನವದೆಹಲಿ: ಈಗಾಗಲೇ ಐಪಿಎಲ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಸ್ವಹಿತಾಸಕ್ತಿ  ಸಂಘರ್ಷದ ಆರೋಪ ಎದುರಿಸುತ್ತಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ತಾವು ಬಿಸಿಸಿಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಂಸ್ಥೆಯ ಸದಸ್ಯರ ಮೇಲೆ ಗೂಡಚರ್ಯೆ ನಡೆಸಿದ್ದು, ಅದಕ್ಕಾಗಿ ಲಂಡನ್ ಮೂಲದ ಖಾಸಗಿ ಗುಪ್ತಚರ ಕಂಪನಿಯೊಂದಕ್ಕೆ  ಬಿಸಿಸಿಐ ಖಜಾನೆಯಿಂದ 14 ಕೋಟಿ ರೂ. ನೀಡಿರುವ ಆರೋಪಗಳು ಕೇಳಿಬಂದಿವೆ. ಅದಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫ್ರಾಂಚೈಸಿಯನ್ನು ಟ್ರಸ್ಟ್ ಒಂದಕ್ಕೆ  5 ಲಕ್ಷ ರೂಪಾಯಿಗೆ ಮಾರಾಟ ಮಾಡುವ ಪ್ರಸ್ತಾವನೆ ಸಲ್ಲಿಸಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಗೂಢಚರ್ಯೆ
ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷರಾಗಿದ್ದ ಸಮಯದಲ್ಲಿ ಸಂಸ್ಥೆಯ ಸದಸ್ಯರ ಮೇಲೆ ಒಂದು ಕಣ್ಣಿಟ್ಟಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸದಾ ಗುಂಪುಗಾರಿಕೆಯಿಂದ, ಆಂತರಿಕ ರಾಜಕೀಯದಿಂದ ಬೇಯುತ್ತಿರುವ  ಬಿಸಿಸಿಐನಲ್ಲಿ ಯಾರಾದರೂ ತಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆಯೇ ಯಾರಿಂದಾದರೂ ತಮ್ಮ ಅಧ್ಯಕ್ಷಗಿರಿಗೆ ಸಂಚಕಾರವಿದೆಯೇ ಎಂಬ ನಿಟ್ಟಿನಲ್ಲಿ ಸದಸ್ಯರ ಚಲನವಲನ, ಇಮೇಲ್ ಹಾಗೂ ದೂರವಾಣಿ ಕರೆಗಳ ಮೇಲೆ  ನಿಗಾ ವಹಿಸಿದ್ದರು ಎಂದು ಹೇಳಲಾಗಿದೆ. ತಮ್ಮ ಈ ಕಾರ್ಯ ಸಾಧನೆಗಾಗಿ, ಲಂಡನ್ ಮೂಲದ ಖಾಸಗಿ ಸಂಸ್ಥೆಯೊಂದಿಗೆ  ರಹಸ್ಯ ಒಪ್ಪಂದ ಮಾಡಿಕೊಂಡಿದ್ದ ಅವರು, ಇದಕ್ಕಾಗಿ 14 ಕೋಟಿ ರೂ. ಮೊತ್ತವನ್ನು ಖಾಸಗಿ ಸಂಸ್ಥೆಗೆ ನೀಡಿದ್ದರು ಎನ್ನಲಾಗಿದೆ.
ತನಿಖಾ ಸಮಿತಿ ಮೇಲೂ ಕಣ್ಣು?: ಇದೇ ವರ್ಷ ಫೆಬ್ರವರಿಯಲ್ಲಿ ಐಪಿಎಲ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾ. ಮುದ್ಗಲ್ ಸಮಿತಿ ಸದಸ್ಯರ ಮೇಲೆ ಬಿಸಿಸಿಐನ ಪ್ರಭಾವಿ  ವ್ಯಕ್ತಿಯೊಬ್ಬರು ಗೂಢಚರ್ಯೆ ನಡೆಸುತ್ತಿದ್ದರು ಎಂದು ಆರೋಪಿಸಿದ್ದರು. ತನಿಖಾ ಸಮಿತಿಯ ಸದಸ್ಯರ ಫೋನ್ ಕರೆಗಳನ್ನು ಟ್ಯಾಪ್ ಮಾಡಲಾಗುತ್ತಿದೆ. ತಮ್ಮ ಫೋನ್ ಕರೆಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಟ್ವಿಟರ್ ನಲ್ಲಿ ಅವರು ಹೇಳಿಕೊಂಡಿದ್ದರು.
ಆಂತರಿಕ ಸಮಿತಿ?: ಸದಸ್ಯರ ವಿರುದ್ಧ ಶ್ರೀನಿವಾಸನ್ ಗೂಢಚರ್ಯೆ ನಡೆಸಿರುವ ಆರೋಪಗಳನ್ನು  ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ  ನೇತೃತ್ವದಲ್ಲಿ  ಆಂತರಿಕ ಸಮಿತಿಯೊಂದನ್ನು ರಚಿಸಿ ಪ್ರಕರಣದ ತನಿಖೆ ನಡೆಸುವ ಬಗ್ಗೆ ನಿರ್ಧರಿಸಲಾಗಿದೆ.

SCROLL FOR NEXT