ಕ್ರೀಡೆ

ಧೋನಿ ಹೊರತುಪಡಿಸಿ ಎಲ್ಲಾ ಕ್ಯಾಪ್ಟನ್ ಗಳನ್ನು ಸ್ಮರಿಸಿದ ಸೆಹ್ವಾಗ್

Shilpa D

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನದಿಂದ ನಿವೃತ್ತರಾಗಿರುವ ವೀರೇಂದ್ರ ಸೆಹ್ವಾಗ್ ಅವರನ್ನು ಬಿಸಿಸಿಐ ವತಿಯಿಂದ ಸನ್ಮಾನಿಸಲಾಯಿತು.

ವೃತ್ತಿ ಜೀವನದಲ್ಲಿ ತಮಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕರುಗಳಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹಾಗೂ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ಅವರಿಗೆ ಧನ್ಯವಾದ ಹೇಳಿದರು.

ಆದರೆ ಸುಮಾರು ಆರು ವರ್ಷಗಳ ಕಾಲ ರಾಷ್ಟ್ರೀಯ ತಂಡದಲ್ಲಿ ತಮ್ಮ ಸಹ ಆಟಗಾರರೂ ಬಳಿಕ ಕ್ಯಾಪ್ಟನ್  ಆಗಿದ್ದ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಮಾತ್ರ ಯಾವುದೇ ಕಾರಣಕ್ಕೂ ಎಲ್ಲಿಯೂ ಉಲ್ಲೇಖಿಸಲಿಲ್ಲ.

ಬಿಸಿಸಿಐ ಪರವಾಗಿ ಕಾರ್ಯದರ್ಶಿ ಅನುರಾಗ್ ಠಾಕೂರ್ ಸೆಹ್ವಾಗ್ ಅವರಿಗೆ ಟ್ರೋಫಿ ನೀಡಿ ಸನ್ಮಾನಿಸಿದರು. ಈ ವೇಳೆ ಸೆಹ್ವಾಗ್ ತಾಯಿ ಕೃಷ್ಣಾ ಸೆಹ್ವಾಗ್, ಪತ್ನಿ ಆರತಿ ಮತ್ತು ಪುತ್ರರು ಉಪಸ್ಥಿತರಿದ್ದರು.  

ಸೆಹ್ವಾಗ್ ತಮ್ಮ ವಿದಾಯ ಭಾಷಣದಲ್ಲಿ, ಬಿಸಿಸಿಐನಿಂದ ಹಿಡಿದು ಡಿಡಿಸಿಎವರೆಗೆ ತಮ್ಮ ಮೊದಲ ಕೋಚ್‌ ಎ.ಎನ್‌.ಶರ್ಮಾ ಅವರಿಂದ ಹಿಡಿದು ದೆಹಲಿಯ 19ವರ್ಷದೊಳಗಿನ ತಂಡಕ್ಕೆ ಆಯ್ಕೆ ಮಾಡಿದ ಸತೀಶ್‌ ಶರ್ಮಾ ಅವರವರೆಗೆ ಹೆಸರು ಹಿಡಿದು ಕರೆದು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ನನಗೆ ಕ್ರಿಕೆಟ್‌ ಆಡಲು ಅವಕಾಶದೊಂದಿಗೆ ಸ್ವಾತಂತ್ರ್ಯ ಕೊಟ್ಟಿದ್ದ ಅಪ್ಪ, ನನ್ನ ಎಲ್ಲ ಕೋಚ್‌ಗಳು, ಅದರಲ್ಲೂ ನನ್ನನ್ನು ಕ್ರಿಕೆಟರ್‌ ಆಗಿ ರೂಪಿಸಿದ ಎ.ಎನ್‌.ಶರ್ಮಾ ಅವರನ್ನು ಸ್ಮರಿಸುವೆ ಎಂದು ಸೆಹ್ವಾಗ್‌ ಹೇಳಿದರು.ಸೆಹ್ವಾಗ್ ತನ್ನ 14 ವರ್ಷ ಸುದೀರ್ಘ ವೃತ್ತಿಜೀವನದಲ್ಲಿ ಸಹಕರಿಸಿದ ದೈಹಿಕ ತರಬೇತುದಾರರು ಸೇರಿದಂತೆ ಸಿಬ್ಬಂದಿ ಕೊಡುಗೆ ಪ್ರಸ್ತಾಪಿಸಿದರು.

SCROLL FOR NEXT