ನವದೆಹಲಿ: ನಿರ್ಣಾಯಕ ಘಟ್ಟದಲ್ಲಿ ಆಡಲಿಳಿದು ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದ ಮಧ್ಯಮ ಕ್ರಮಾಂಕಿತ ಬ್ಯಾಟ್ಸ್‍ಮನ್ ಅಜಿಂಕ್ಯ ರಹಾನೆ (ಅಜೇಯ 89) ಪ್ರವಾಸಿ ದ.ಆಫ್ರಿಕಾ ವಿರುದ್ಧದ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ಹರಿಣಗಳು ಸಂಪೂರ್ಣ ಮೇಲುಗೈ ಸಾಧಿಸದಂತೆ ನೋಡಿಕೊಂಡರು.
ಅವರ ಸಹನಾಭರಿತ ಆಟದ ಫಲವಾಗಿ ಆತಿಥೇಯ ಭಾರತ ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನದಂದು 84 ಓವರ್‍ಗಳಲ್ಲಿ 7 ವಿಕೆಟ್‍ಗೆ 231 ರನ್ ಮಾಡಿತ್ತು. ಮಂದಬೆಳಕು ಆರು ಓವರ್‍ಗಳ ಆಟಕ್ಕೆ ಅಡ್ಡಿಪಡಿಸಲಾಗಿ ಅವಧಿಗೂ ಮುಂಚೆಯೇ ದಿನದಾಟಕ್ಕೆ ವಿದಾಯ ಹೇಳಲಾಯಿತು. ಆಟ ನಿಂತಾಗ ಅಜಿಂಕ್ಯ ರಹಾನೆ ಜತೆಗೆ ರವಿಚಂದ್ರನ್ ಅಶ್ವಿನ್ 6 ರನ್ ಗಳಿಸಿ ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದರು. ಈ ಜೋಡಿ 8ನೇ ವಿಕೆಟ್‍ಗೆ ಮುರಿಯದ 33 ರನ್‍ಗಳ ಜತೆಯಾಟವಾಡಿದ್ದು ದಿನಾಂತ್ಯದ ಹೈಲೈಟ್ ಎನಿಸಿತು.
ಶುರುವಾದ ಪಿಚ್ ತಿರುವು: ಬೆಳಿಗ್ಗೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಮತ್ತೆ ಅಸ್ಥಿರ ಬ್ಯಾಟಿಂಗ್‍ನಿಂದ ತಡವರಿಸಿತು. ನಿರೀಕ್ಷೆಯಂತೆಯೇ ಪಿಚ್ ಆರಂಭದಿಂದಲೇ ತಿರುವು ಪಡೆಯಲು ಶುರುವಿಟ್ಟುಕೊಂಡಿದ್ದರಿಂದ ಬ್ಯಾಟಿಂಗ್ ನಡೆಸುವುದು ಸವಾಲಾಗಿ ಪರಿಣಮಿಸಿತು. ಇದರ ಫಲವಾಗಿ ಆರಂಭಿಕ ಮುರಳಿ ವಿಜಯ್ ಕೇವಲ 12 ರನ್‍ಗಳಿಗೆ ಡೇನ್ ಪೀಟ್ ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಮೊತ್ತವನ್ನು ಕಲೆಹಾಕಲು ಅವರು ತೆಗೆದುಕೊಂಡದ್ದು 59 ಎಸೆತಗಳನ್ನು. ಬಳಿಕ ಬಂದ ಚೇತೇಶ್ವರ ಪೂಜಾರ ಅವರೊಂದಿಗೆ ಆರಂಭಿಕ ಶಿಖರ್ ಧವನ್ ಹೋರಾಟ ಮುಂದುವರೆಸಿ ಭೋಜನ ವಿರಾಮದವರೆಗೂ ತಂಡ ಮತ್ತೊಂದು ಎಡವಟ್ಟು ಮಾಡಿಕೊಳ್ಳದಂತೆ ನೋಡಿಕೊಂಡರು. ಈ ಸಮಯಕ್ಕೆ ಭಾರತ 26 ಓವರ್‍ಗಳಲ್ಲಿ 1 ವಿಕೆಟ್‍ಗೆ 60 ರನ್ ಗಳಿಸಿತ್ತು.
ಆದರೆ ಭೋಜನ ವಿರಾಮದ ನಂತರ ಭಾರತ ತ್ವರಿತಗತಿಯಲ್ಲಿ ಎರಡು ವಿಕೆಟ್ ಕಳೆದುಕೊಂಡು ತೀವ್ರ ಹಿನ್ನಡೆ ಅನುಭವಿಸಿತು. 31 ರನ್ ಗಳಿಸಿ ಚೆನ್ನಾಗಿ ಆಡುತ್ತಿದ್ದ ಧವನ್ ಆನಂತರ ಕೇವಲ 2 ರನ್ ಗಳಿಸಿ ಡೇನ್ ಪೀಟ್ ಅವರು ಹೊಸೆದ ಎಲ್‍ಬಿ ಬಲೆಗೆ ಬಿದ್ದು ಕ್ರೀಸ್ ತೊರೆದರು. ಇದಾದ ಕೆಲವೇ ಹೊತ್ತಿನಲ್ಲಿ ವೇಗಿ ಕೈಲ್ ಅಬಾಟ್ 30ನೇ ಓವರ್‍ನ ಕೊನೆಯ ಎಸೆತದಲ್ಲಿ ಚೇತೇಶ್ವರ ಪೂಜಾರ (14) ಅವರನ್ನು ಪೆವಿಲಿಯನ್‍ಗೆ ಅಟ್ಟಿದರು.
ನೆರವಿಗೆ ಧಾವಿಸಿದ ಕೊಹ್ಲಿ-ರಹಾನೆ: ಇನ್ನು ತವರಿನಲ್ಲಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುತ್ತಿರುವ ನಾಯಕ ವಿರಾಟ್ ಕೊಹ್ಲಿ (44) ಮತ್ತೆ ಅಸ್ಥಿರ ಪ್ರದರ್ಶನದಿಂದ ಬಳಲಿದರು. ಡೇನ್ ಪೀಟ್ ಅವರ ಜತೆಗೆ ಕೈಲ್ ಅಬಾಟ್ ತೋರುತ್ತಿದ್ದ ಶಿಸ್ತುಬದ್ಧ ಬೌಲಿಂಗ್ ಮಧ್ಯೆಯೂ ನಿರ್ಭಿಡೆಯಿಂದಲೇ ಬ್ಯಾಟ್ ಬೀಸುತ್ತಾ ಸಾಗಿದ ಕೊಹ್ಲಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಇನ್ನಿಂಗ್ಸ್ ನ 47ನೇ ಓವರ್‍ನ ಕೊನೆಯ ಎಸೆತದಲ್ಲಿ ಡೇನ್ ಪೀಟ್ ಅವರ ಬೌಲಿಂಗ್‍ಗೆ ಉತ್ತರಿಸುವಾಗ ಡೇನ್ ವಿಲಾಸ್‍ಗೆ ಕ್ಯಾಚಿತ್ತ ಕೊಹ್ಲಿ ನಿರಾಸೆಯಿಂದಲೇ ಕ್ರೀಸ್ ತೊರೆದರು. 4ನೇ ವಿಕೆಟ್‍ಗೆ ರಹಾನೆ ಜತೆಗೆ ಕಲೆಹಾಕಿದ 70 ಗಳ ಜೊತೆಯಾಟ ಹೀಗೆ ಬೇರ್ಪಟ್ಟಿತು . 62 ಎಸೆತಗಳನ್ನು ಎದುರಿಸಿದ ಕೊಹ್ಲಿ 7 ಆಕರ್ಷಕ ಬೌಂಡರಿ ಬಾರಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.
ಮಿಂಚಿದ ರಹಾನೆ: ಕೊಹ್ಲಿ ನಿರ್ಗಮನದ ನಂತರ ಆಡಲಿಳಿದ ರೋಹಿತ್ ಶರ್ಮಾ ಮತ್ತು ವೃದ್ಧಿಮಾನ್ ಸಾಹ ತಲಾ 1 ರನ್‍ಗೆ ನಿರುತ್ತರವಾದಾಗ ಭಾರತದ ಸ್ಥಿತಿ ಶೋಚನೀಯ ಎಂಬಂತಾಯಿತು. ಮಧ್ಯಾಹ್ನದ ಚಹಾ ವಿರಾಮದ ಹೊತ್ತಿಗೆ 6 ವಿಕೆಟ್‍ಗೆ 139 ರನ್ ಗಳಿಸಿದ್ದ ಭಾರತ 200 ರನ್‍ಗಳ ಗಡಿ ದಾಟಲು ರಹಾನೆ ಕೊಡುಗೆ ಮಹತ್ವವೆನಿಸಿತು. ಈ ಹಂತದಲ್ಲಿ ಆಡಲಿಳಿದ ರವೀಂದ್ರ ಜಡೇಜಾ (24) ರಹಾನೆಗೆ ಭರ್ಜರಿ ಸಾಥ್ ನೀಡಿದರು. ಈ ಜೋಡಿ 7ನೇ ವಿಕೆಟ್‍ಗೆ ಅಮೂಲ್ಯ 59 ರನ್‍ಗಳನ್ನು ಕಲೆಹಾಕಿ ಮತ್ತೆ ಹರಿಣಗಳ ಅಸಹನೆಗೆ ಕಾರಣವಾಯಿತು. ಆಕರ್ಷಕ ಬ್ಯಾಟಿಂಗ್‍ನಿಂದ ಭರ್ಜರಿ ಅರ್ಧಶತಕ ಪೂರೈಸಿದ ರಹಾನೆ ವಿಕೆಟ್ ಪಡೆಯಲು ಹರಿಣಗಳನ್ನು ನಾನಾ ರೀತಿಯಲ್ಲಿ ಯತ್ನಿಸಿದರೂ ಫಲ ನೀಡಲಿಲ್ಲ. ಇನ್ನೊಂದೆಡೆ ದ.ಆಫ್ರಿಕಾ ಆಟಗಾರರ ಕಳಪೆ ಫೀಲ್ಡಿಂಗ್‍ನಿಂದ ಎರಡು ಬಾರಿ ಸಿಕ್ಕ ಜೀವದಾನವನ್ನು ಅವರು ಚೆನ್ನಾಗಿಯೇ ಬಳಸಿಕೊಂಡರು. ದಕ್ಷಿಣ ಆಫ್ರಿಕಾ ಪರ ಸ್ಪಿನ್ನರ್ ಡೇನ್ ಪೀಟ್ 101ಕ್ಕೆ 4 ವಿಕೆಟ್ ಗಳಿಸಿದರೆ, ಕೈಲ್ ಅಬಾಟ್ 23ಕ್ಕೆ 3ವಿಕೆಟ್ ಪಡೆದರು.
ಸ್ಕೋರ್ ವಿವರ ಭಾರತ ಮೊದಲ
ಮುರಳಿ ವಿಜಯ್ ಸಿ ಆಮ್ಲಾ ಬಿ ಪೀಟ್ 12
ಶಿಖರ್ ಧವನ್ ಎಲ್‍ಬಿ ಬಿ ಪೀಟ್ 33
ಚೇತೇಶ್ವರ ಪೂಜಾರ ಬಿ ಕೈಲ್ ಅಬಾಟ್ 14
ವಿರಾಟ್ ಕೊಹ್ಲಿ ಸಿ ವಿಲಾಸ್ ಬಿ ಪೀಟ್ 44
ಅಜಿಂಕ್ಯ ರಹಾನೆ ಬ್ಯಾಟಿಂಗ್ 89
ರೋಹಿತ್ ಶರ್ಮಾ ಸಿ ತಾಹಿರ್ ಬಿ ಪೀಟ್ 01
ವೃದ್ಧಿಮಾನ್ ಸಾಹ ಬಿ ಕೈಲ್ ಅಬಾಟ್ 01
ಜಡೇಜಾ ಸಿ ಎಲ್ಗರ್ ಬಿ ಅಬಾಟ್ 24
ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ 06
ಇತರೆ: (ಬೈ-4, ನೋಬಾಲ್-3) 07
ವಿಕೆಟ್‍ಪತನ: 1-30 (ಮುರಳಿ), 2-62 (ಧವನ್), 3-66 (ಪೂಜಾರ), 4-136
(ಕೊಹ್ಲಿ), 5-138 (ರೋಹಿತ್), 6-139 (ಸಾಹ), 7-198 (ಜಡೇಜಾ)
ಬೌಲಿಂಗ್ ವಿವರ: ಮಾರ್ನಿ ಮಾರ್ಕೆಲ್ 17--5-40-0, ಕೈಲ್ ಅಬಾಟ್
17-6-23-3, ಡೇನ್ ಪೀಟ್ 34-5-101-4, ಇಮ್ರಾನ್ ತಾಹಿರ್ 7-1-36-0,
ಡೀನ್ ಎಲ್ಗರ್ 5-0-15-0, ಜೆಪಿ ಡುಮಿನಿ 4-0-12-0