ಬೆಂಗಳೂರು: ಪ್ರತಿಭಾನ್ವಿತ ಆಟಗಾರ ಶಾಹಿಲ್ ಹಮೋದ್ ದಾಖಲಿಸಿದ ಸತತ ನಾಲ್ಕು ಗೋಲುಗಳ ಸಹಾಯದಿಂದ ಜಮ್ಮುಕಾಶ್ಮೀರ ತಂಡ, 29ನೇ ಅಖಿಲ ಭಾರತ ಪೋಸ್ಟಲ್ ಫುಟ್ಬಾಲ್ ಚಾಂಪಿಯನ್‍ಶಿಪ್‍ನ ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ಜಯಿಸಿ, ಸೆಮಿಫೈನಲ್ ಗೆ ಕಾಲಿಟ್ಟಿತು.
ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ, ಉತ್ತರ ಪ್ರದೇಶ ವಿರುದ್ಧ ಸೆಣಸಿದ ಜಮ್ಮು-ಕಾಶ್ಮೀರ ತಂಡ, ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಗೆಲುವು ಕಂಡಿತು. ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹಮೋದ್, ಪಂದ್ಯದ 27, 51, 54 ಹಾಗೂ 58ನೇ ನಿಮಿಷಗಳಲ್ಲಿ ಒಂದರ ಹಿಂದೊಂದರಂತೆ ನಾಲ್ಕು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ, ಉಪಾಂತ್ಯಕ್ಕೆ ಕಾಲಿಟ್ಟಿರುವ ಜಮ್ಮುಕಾಶ್ಮೀರ, ಅಲ್ಲಿ ಕರ್ನಾಟಕ ತಂಡದ ವಿರುದ್ಧ ಸೆಣಸಿದೆ. ತಮಿಳುನಾಡಿಗೆ ಜಯ ಇನ್ನು ಬುಧವಾರ ನಡೆದ `ಎ' ಗುಂಪಿನ ಕ್ವಾರ್ಟರ್ಫೈನಲ್ ಹಂತದ ಪಂದ್ಯದಲ್ಲಿ, ತಮಿಳುನಾಡು ತಂಡ, ಕೇರಳ ತಂಡವನ್ನು 2-1 ಗೋಲುಗಳಿಂದ ಮಣಿಸಿ ಉಪಾಂತ್ಯ ಘಟ್ಟ ಪ್ರವೇಶಿಸಿದೆ. ಆ ಸುತ್ತಿನಲ್ಲಿ ತಮಿಳುನಾಡು, ಒಡಿಶಾ ತಂಡದ ವಿರುದ್ಧ ಸೆಣಸಲಿದೆ.