ಮೆಲ್ಬೋರ್ನ್: ಇದೇ ವರ್ಷ ನಡೆದಿದ್ದ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ನಂತರ ಪಂದ್ಯಶ್ರೇಷ್ಠ ಗೌರವ ಯಾರು ಪಡೆಯಲಿದ್ದಾರೆ ಎಂಬುದರ ಬಗ್ಗೆ ಕೇವಲ 9 ಆಸ್ಟ್ರೇಲಿಯನ್ ಡಾಲರ್ (ರು 431) ಬೆಟ್ ಕಟ್ಟಿದ್ದ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ಏಂಜೆಲಾ ರೀಕ್ಸ್ ಗೆ 2 ವರ್ಷ ನಿಷೇಧ ಹೇರಲಾಗಿದೆ.
ಬಿಗ್ ಬ್ಯಾಷ್ ಟೂರ್ನಿಯಲ್ಲಿ ರೀಕ್ಸ್, ಸಿಡ್ನಿ ಸಿಕ್ಸರ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಶಿಕ್ಷೆ ಪ್ರಕಟಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ರೀಕ್ಸ್ ಗೆ ವಾಗ್ದಂಡನೆ ವಿಧಿಸಿದ್ದೂ ಅಲ್ಲದೆ, ನಿಷೇಧದ ಅವಧಿಯಲ್ಲಿ ಕಿರಿಯ ಕ್ರಿಕೆಟಿಗರಿಗೆ ಭ್ರಷ್ಟಾಚಾರ ನಿಗ್ರಹ ನಿಟ್ಟಿನಲ್ಲಿ ಆಟಗಾರರು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ತರಗತಿ ನೀಡಬೇಕೆಂದು ಸೂಚಿಸಿದೆ.