ಮುಂಬೈ: ಮುಂದಿನ ವರ್ಷ ಬಾಂಗ್ಲಾದೇಶದಲ್ಲಿ ನಡೆಯಲಿರುವ ಕಿರಿಯರ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ 15 ಆಟಗಾರರಿರುವ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಈಶನ್ ಕಿಶನ್ ತಂಡದ ಸಾರಥ್ಯ ವಹಿಸಿದ್ದರೆ, ಉಪನಾಯಕನಾಗಿ ರಿಶಭ್ ಪಂತ್ ಅವರನ್ನು ನೇಮಿಸಲಾಗಿದೆ.
ಮಂಗಳವಾರ ಭಾರತ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಆಯ್ಕೆಸಮಿತಿ ತಂಡವನ್ನು ಅಂತಿಮಗೊಳಿಸಿದ್ದು, ಟೂರ್ನಿಯಲ್ಲಿ `ಡಿ' ಗುಂಪಿನಲ್ಲಿರುವ ಭಾರತದ ಜತೆಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ನೇಪಾಳ ತಂಡಗಳು ಸ್ಥಾನ ಪಡೆದಿವೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಭಾರತ ಈ ಪಂದ್ಯಾವಳಿಯ ತನ್ನ ಮೊದಲ ಅಭಿಯಾನವನ್ನು ಆರಂಭಿಸಲಿದೆ. ಮುಂದಿನ ತಿಂಗಳು ಜನವರಿ 22ರಿಂದ ಆರಂಭವಾಗಲಿರುವ ಈ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, 48 ಪಂದ್ಯಗಳು ನಡೆಯಲಿವೆ. ಬಾಂಗ್ಲಾದೇಶದ ಸಿಲ್ಹೆಟ್, ಚಿತ್ತಗಾಂಗ್, ಢಾಕಾ ಮತ್ತು ಕಾಕ್ಸ್ ಬಜಾರ್ ಈ ನಾಲ್ಕು ನಗರಗಳು ಆತಿಥ್ಯ ಹೊತ್ತಿವೆ.
ಸೆಮಿಫೈನಲ್ಸ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನಗಳನ್ನು ನಿಗದಿಪಡಿಸಲಾಗಿದ್ದು, ಪ್ರಶಸ್ತಿ ಸುತ್ತಿನ ಸೆಣಸಾಟವು ಮೀರ್‍ಪುರದ ಶೇರ್-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜರುಗಲಿದೆ. ಅಂದಹಾಗೆ 1988ರಲ್ಲಿ ಮೊದಲ ಬಾರಿಗೆ ಅಸ್ವಿತ್ವಕ್ಕೆ ಬಂದ ಐಸಿಸಿ ಕಿರಿಯರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಈ ವರೆಗೆ (2000, 2008, 2012) ಮೂರು ಬಾರಿ ಚಾಂಪಿಯನ್ ಆಗಿದೆ. ಆಸ್ಟ್ರೇಲಿಯಾ (1988 ಮತ್ತು 2002), ಪಾಕಿಸ್ತಾನ (2004, 2006) ಎರಡು ಬಾರಿ ಟ್ರೋಫಿ ಗೆದ್ದಿದ್ದರೆ, ಇಂಗ್ಲೆಂಡ್ (1998) ಮತ್ತು ದ.ಆಫ್ರಿಕಾ ಕಳೆದ ಋತುವಿನಲ್ಲಿ ಚಾಂಪಿಯನ್ ಆಗಿದ್ದವು. ಸೋಮವಾರವಷ್ಟೇ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಮುಕ್ತಾಯ ಕಂಡ 19 ವರ್ಷದೊಳಗಿನವರ ತ್ರಿಕೋನ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ ನಾಯಕತ್ವದಲ್ಲಿ ಭಾರತ ಕಿರಿಯರ ತಂಡ ಚಾಂಪಿಯನ್ ಆಗಿತ್ತು.
ದ್ರಾವಿಡ್‍ಗೆ ಮೊದಲ ವಿಶ್ವಕಪ್: ಕಿರಿಯರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ರಾಹುಲ್ ದ್ರಾವಿಡ್ ಅವರ ಪಾಲಿಗೆ ಈ ಪಂದ್ಯಾವಳಿ ಮಹತ್ವವೆನಿಸಿದೆ. ಯುವತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿರುವ ಅವರು ವಿಶ್ವಕಪ್ ತಂದುಕೊಡುವ ಭರವಸೆಯಲ್ಲಿದ್ದಾರೆ.
ತಂಡ ಇಂತಿದೆ
ಈಶನ್ ಕಿಶನ್ (ನಾಯಕ), ರಿಶಭ್ ಪಂತ್ (ಉಪನಾಯಕ), ವಾಷಿಂಗ್ಟನ್ ಸುಂದರ್, ಸರ್ಫಜ್ ಖಾನ್, ಅಮನ್‍ದೀಪ್ ಖಾರೆ, ಅನ್ಮೋಲ್‍ಪ್ರೀತ್ ಸಿಂಗ್, ಅರ್ಮಾನ್ ಜಾಫರ್, ರಿಕಿ ಭುಯಿ, ಮಯಾಂಕ್ ದಾಗರ್, ಜೀಶನ್ ಅನ್ಸಾರಿ, ಮಹಿಪಾಲ್ ಲಾಮ್ರರ್, ಆವೇಶ್ ಖಾನ್, ಶುಭಂ ಮಾವಿ, ಖಲೀಲ್ ಅಹಮದ್ ಮತ್ತು ರಾಹುಲ್ ಬಾಥಮ್.