ಕರಾಚಿ: ಸ್ಪಾಟ್ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿ ಐದು ವರ್ಷಗಳ ಅಮಾನತಿನ ಶಿಕ್ಷೆ ಅನುಭವಿಸಿ ಮತ್ತೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ತವಕದಲ್ಲಿರುವ ಪಾಕಿಸ್ತಾನದ ಎಡಗೈ ವೇಗಿ ಮೊಹಮದ್ ಅಮೀರ್, ರಾಷ್ಟ್ರೀಯ ಶಿಬಿರದ ವೇಳೆ ಇತರೆ ಆಟಗಾರರ ಮುಂದೆ ಕಣ್ಣೀರಿಟ್ಟು ಕ್ಷಮೆ ಕೋರಿದ್ದಾರೆ.
ಆನಂತರ ಅಮೀರ್ ತಂಡಕ್ಕೆ ಮರಳುವುದನ್ನು ವಿರೋಧಿಸುತ್ತಿದ್ದ ಆಟಗಾರರು ಅಮೀರ್ ಸೇರ್ಪಡೆಯನ್ನು ಒಪ್ಪಿಕೊಂಡಿದ್ದಾರೆ. ಭಾನುವಾರ ತಂಡದ ಮುಖ್ಯ ಕೋಚ್ ವಕಾರ್ ಯೂನಿಸ್ ಆಟಗಾರರ ಸಭೆಯನ್ನು ಏರ್ಪಡಿಸಿದ್ದರು. ತನ್ನ ಉಪಸ್ಥಿತಿಯಿಂದ ತಂಡದ ಶಿಬಿರದಲ್ಲಿ ಮನಸ್ಥಾಪ ಹೆಚ್ಚಾಗಿ ರುವುದನ್ನು ಅಮೀರ್ ಅರಿತಿದ್ದರು.
ಈ ಹಿಂದೆ ಮಾಡಿದ ತಪ್ಪಿಗೆ ಕ್ಷಮೆ ನೀಡಿ. ಈ ರೀತಿ ಯಾದ ತಪ್ಪು ಮತ್ತೆ ಮರುಕಳಿಸುವುದಿಲ್ಲ ಎಂದು ಅಮೀರ್ ಪ್ರತಿ ಆಟಗಾರನಿಗೆ ಕ್ಷಮೆ ಕೋರಿದರು. ನಂತರ ತಾನು ರಾಷ್ಟ್ರೀಯ ತಂಡದಲ್ಲಿ ಆಡಲು ಮತ್ತೊಂದು ಅವಕಾಶಕ್ಕೆ ಯೋಗ್ಯನಲ್ಲವೆಂದು ಇತರರ ಅಭಿಪ್ರಾಯ ವಾದರೆ, ಈ ಕ್ಷಣದಲೇ ಶಿಬಿರದಿಂದ ಹೊರ ಹೋಗಲು ಸಿದ್ಧನಾಗಿದ್ದೇನೆ. ಮತ್ತೆ ನನ್ನಿಂದ ಪಾಕಿಸ್ತಾನ ಕ್ರಿಕೆಟ್‍ಗೆ ಕೆಟ್ಟ ಹೆಸರು ಬರುವುದು ಬೇಡ ಎಂದಿದ್ದಾಗಿ ಮೂಲಗಳು ವಿವರಿಸಿವೆ.
ವಿರೋಧಿಸಿದರೆ 20 ಲಕ್ಷ ದಂಡ: ಮತ್ತೊಂದೆಡೆ ಪಾಕಿಸ್ತಾನ ಕ್ರಿಕೆಟ್ ಸಮಿತಿ ಮೊಹಮದ್ ಹಫೀಜ್ ಮತ್ತು ಅಜರ್ ಅಲಿ ಸೇರಿದಂತೆ ಪ್ರತಿಯೊಬ್ಬ ಕ್ರಿಕೆಟ್ ಆಟಗಾರನಿಂದ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದೆ. ಆ ಮೂಲಕ ಆಮೀರ್ ಅಥವಾ ಸ್ಪಾಟ್ ಫಿಕ್ಸಿಂ ಗ್‍ನಲ್ಲಿ ಭಾಗಿಯಾದ ಇತರೆ ಯಾವುದೇ ಆಟಗಾರನೊಂದಿಗೆ ಆಡಲು ವಿರೋಧ ವ್ಯಕ್ತಪಡಿಸಿದರೆ, ಅವರಿಗೆ 20 ಲಕ್ಷ ದಂಡ ವಿಧಿಸಲು ಪಿಸಿಬಿ ನಿರ್ಧರಿಸಿದೆ. ಕಾನೂನಿನ ಬಲವನ್ನು ಪಡೆಯಲು ಪಿಸಿಬಿ ಪ್ರತಿ ಆಟಗಾರರಿಂದ ದಾಖಲೆಗೆ ಸಹಿ ಹಾಕಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.