ಅನುಚಿತ ವರ್ತನೆ ತೋರದಿರಿ: ಕ್ರಿಕೆಟಿಗರಿಗೆ ಐಸಿಸಿ ಎಚ್ಚರಿಕೆ
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಮೈದಾನದಲ್ಲಿ ಅನುಚಿತವಾಗಿ ವರ್ತಿಸಬಾರದು ಎಂದು ಐಸಿಸಿ ಎಂದು ಎಚ್ಚರಿಕೆ ನೀಡಿದೆ.
ಸಿಡ್ನಿ: ಫೆಬ್ರವರಿ14 ರಿಂದ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಮೈದಾನದಲ್ಲಿ ಅನುಚಿತವಾಗಿ ವರ್ತಿಸಬಾರದು ಎಂದು ಕ್ರಿಕೆಟಿಗರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಎಂದು ಎಚ್ಚರಿಕೆ ನೀಡಿದೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಆಟಗಾರರ ನಡುವಿನ ಮಾತಿನ ಚಕಮಕಿಯನ್ನು ತಡೆಯಲು ಐಸಿಸಿ ನಿರ್ಧರಿಸಿದ್ದು, ಈ ಸಂಬಂಧ ನಾಲ್ವರು ಆಟಗಾರರಿಗೆ ಐಸಿಸಿ ಖಡಕ್ ಎಚ್ಚರಿಕೆ ನೀಡಿ ನೋಟಿಸ್ ನೀಡಿದೆ. ಭಾರತ ತಂಡದ ಉಪನಾಯಕ ವಿರಾಟ್ ಕೊಹ್ಲಿ, ಆರಂಭಿಕ ಆಟಗಾರ ಶಿಖರ್ ಧವನ್, ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ವಿಂಡೀಸ್ ಅಟಗಾರ ಡ್ವೇಯ್ನ್ ಬ್ರಾವೋ ಅವರಿಗೆ ಐಸಿಸಿ ನೊಟೀಸ್ ನೀಡಿದ್ದು, ಪಂದ್ಯಾವಳಿಯಲ್ಲಿ ಅನುಚಿತವಾಗಿ ವರ್ತಿಸಿದರೆ ಪಂದ್ಯಾವಳಿಯಿಂದಲೇ ನಿಷೇಧ ಮಾಡುವ ಎಚ್ಚರಿಕೆ ನೀಡಿದೆ.
ಕೇವಲ ಈ ನಾಲ್ವರು ಆಟಗಾರರು ಮಾತ್ರವಲ್ಲದೇ ಮೈದಾನದಲ್ಲಿ ಅತಿರೇಕದಿಂದ ವರ್ತಿಸುವ ಇತರೆ ಆಟಗಾರರಿಗೂ ಈ ಮೂಲಕ ಐಸಿಸಿ ಎಚ್ಚರಿಕೆ ನೀಡಿದೆ. ಈ ಹಿಂದೆ ನಡೆದ ಕೆಲವು ಪಂದ್ಯಗಳಲ್ಲಿ ನಾಲ್ಕು ಆಟಗಾರರು ಮೈದಾನದಲ್ಲಿಯೇ ಅತಿರೇಕದ ವರ್ತನೆ ತೋರುವ ಮೂಲಕ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದರು.