ಅಡಿಲೇಡ್: ವಿಶ್ವಕಪ್ ಟೂರ್ನಿಯ ನಿಮಿತ್ತ ಅಡಿಲೇಡ್ ನಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಪಾಕಿಸ್ತಾನಕ್ಕೆ ಗೆಲ್ಲಲು 301 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ನಾಯಕ ಧೋನಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಆಡಿದ ಭಾರತ ದಾಂಡಿಗರು ಬೃಹತ್ ಮೊತ್ತವನ್ನೇ ಕಲೆಹಾಕಿದರು. ಆ ಮೂಲಕ ಪಾಕಿಸ್ತಾನಕ್ಕೆ ಗೆಲ್ಲಲು 301 ರನ್ ಗಳ ಗುರಿ ನೀಡಿದರು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಜೋಡಿ ಕೊಂಚ ಬೇಗನೇ ಬೇರ್ಪಟ್ಟಿತಾದರೂ ಉತ್ತಮ ಆರಂಭವನ್ನಂತೂ ಒದಗಿಸಿತ್ತು. 15 ರನ್ ಗಳಿಸಿದ್ದ ರೋಹಿತ್ ಶರ್ಮಾ ಸೊಹೇಲ್ ಖಾನ್ ಬೌಲಿಂಗ್ ನಲ್ಲಿ ಮಿಸ್ಬಾ ಉಲ್ ಹಕ್ ಅವರಿಗೆ ಕ್ಯಾಚಿತ್ತು ಔಟಾದರು. ಬಳಿಕ ಕ್ರೀಸ್ ಗೆ ಆಗಮಿಸಿದ ತಂಡದ ಉಪನಾಯ ವಿರಾಟ್ ಕೊಹ್ಲಿ ಧವನ್ ಜೊತೆಗೂಡಿ ಉತ್ತಮವಾಗಿ ಆಡಿದರು. ಈ ಜೋಡಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿ 129 ರನ್ ಕಲೆಹಾಕಿತು.
ಈ ಹಂತದಲ್ಲಿ ಅರ್ಧಶತಕ ಸಿಡಿಸಿ ಆಟವಾಡುತ್ತಿದ್ದ ಶಿಖರ್ ಧವನ್ ಅನಗತ್ಯ ರನ್ ಕದಿಯಲು ಹೋಗಿ ರನ್ ಔಟ್ ಆದರು. ಬಳಿಕ ಬಂದ ಮಧ್ಯಮ ಕ್ರಮಾಂಕದ ಆಟಗಾರ ಸುರೇಶ್ ರೈನಾ ವಿರಾಟ್ ಕೊಹ್ಲಿ ಜೊತೆಗೂಡ ಬಿರುಸಿನ ಆಟಕ್ಕೆ ಮುಂದಾದರು. ಕ್ರೀಸ್ ಗೆ ಆಗಮಿಸುತ್ತಿದ್ದಂತೆಯೇ ಬಿರುಸಿನ ಆಟಕ್ಕೆ ಮುಂದಾಗಿದ್ದ ರೈನಾ ಆಕರ್ಷಕ ಅರ್ಧ ಶತಕ ಸಿಡಿಸಿದರು. ಈ ವೇಳೆ ವಿರಾಚ್ ಕೊಹ್ಲಿ ಕೂಡ ಟೂರ್ನಿಯ ತಮ್ಮ ಮೊದಲ ಶತಕ ಸಿಡಿಸಿದರು. ಬಳಿಕ ರೈನಾ ಕೂಡ ತಮ್ಮ ಅರ್ಧ ಶತಕ ಸಿಡಿಸಿದರು. ಈ ವೇಳೆ ಭರ್ಜರಿ ಶತಕ ಸಿಡಿಸಿ ಆಟವಾಡುತ್ತಿದ್ದ ಕೊಹ್ಲಿ ಸೊಹೇಲ್ ಖಾನ್ ಬೌಲಿಂಗ್ ನಲ್ಲಿ ಕೀಪರ್ ಅಕ್ಮಲ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಆಗ ಅವರ ಮೊತ್ತ 106 ರನ್ (126 ಎಸೆತ) ಗಳಾಗಿತ್ತು.
ಕೊಹ್ಲಿ ನಿರ್ಗಮನದ ನಂತರ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದ ರೈನಾ ಕೂಡ ಸೊಹೇಲ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಒಟ್ಟು 56 ಎಸೆತಗಳನ್ನು ಎದುರಿಸಿದ್ದ ರೈನಾ 76 ರನ್ ಸಿಡಿಸಿದ್ದರು. ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಬಳಿಕ ಬಂದ ಎಲ್ಲ ಆಟಗಾರರೂ ಬಿರುಸಿನ ಆಟಕ್ಕೆ ಮುಂದಾಗಿ ಬೇಗನೇ ವಿಕೆಟ್ ಕಳೆದುಕೊಂಡರು, ನಾಯಕ ಧೋನಿ 18 (22 ಎಸೆತ), ರವೀಂದ್ರ ಜಡೇಜಾ 3 (7 ಎಸೆತ) ಮತ್ತು ಅಜಿಂಕ್ಯ ರಹಾನೆ ಶೂನ್ಯ, ಆರ್ ಅಶ್ವಿನ್ 1 ರನ್ (4 ಎಸೆತ), ಮಹಮದ್ ಶಮಿ 3 ರನ್ (2 ಎಸೆತ) ಗಳಿಸುವುದರೊಂದಿಗೆ ಭಾರತದ ಇನ್ನಿಂಗ್ಸ್ ಗೆ ತೆರೆ ಬಿದ್ದಿತು.
ಅಂತಿಮ ಹಂತದಲ್ಲಿ ವಿಕೆಟ್ಗಳು ಬೇಗನೇ ಉರುಳದೇ ಇದ್ದಿದ್ದರೇ ಭಾರತ ಮತ್ತಷ್ಟು ರನ್ ಗಳನ್ನು ಕಲೆಹಾಕುವ ಸಾಧ್ಯತೆ ಇತ್ತು. ಆದರೆ ಭಾರತದ ಬಾಲಂಗೋಚಿಗಳ ಕೆಟ್ಟ ಪ್ರದರ್ಶನದಿಂದಾಗಿ ಪಾಕಿಸ್ತಾನಕ್ಕೆ 301ರನ್ ಗಳ ಟಾರ್ಗೆಟ್ ನೀಡಲಾಗಿದೆ.
ಪಾಕಿಸ್ತಾನದ ಪರ ಉತ್ತಮವಾಗಿ ಬೌಲಿಂಗ್ ಮಾಡಿದ ಸೊಹೇಲ್ ಖಾನ್ ಅವರು 5 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು. ಇದಲ್ಲದೆ ವಹಾಬ್ ರಿಯಾಜ್ ಕೂಡ 1 ವಿಕೆಟ್ ಗಳಿಸಿದರು.