ಕ್ರೀಡೆ

ವಿಶ್ವಕಪ್ ನಲ್ಲಿ ದಾಖಲೆ ಬರೆದ ಮೆಕಲಮ್

Srinivasamurthy VN

ವೆಲ್ಲಿಂಗ್‌ಟನ್: ನ್ಯೂಜಿಲೆಂಡ್ ತಂಡದ ಆಟಗಾರ ಬ್ರೆಂಡನ್ ಮೆಕಲಮ್ ವಿಶ್ವಕಪ್ ನಲ್ಲಿ ಹೊಸ ದಾಖಲೆ ಬರೆದಿದ್ದು, ವಿಶ್ವಕಪ್ ಇತಿಹಾಸದಲ್ಲಿಯೇ ವೇಗದ ಅರ್ಧಶತಕ ಸಿಡಿಸಿದ್ದಾರೆ.

ವೆಲ್ಲಿಂಗ್‌ಟನ್‌ನ ವೆಸ್ಟ್ ಪ್ಯಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೆಕಲಮ್ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ನೀಡಿದ್ದ 123 ರನ್ ಗಳ ಸಾಧಾರಣ ಮೊತ್ತದ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಟಗಾರ ಮೆಕಲಮ್ ಭರ್ಜರಿ ಓಪನಿಂಗ್ ಅನ್ನೇ ನೀಡಿದರು. ಕ್ರೀಸ್‌ಗೆ ಆಗಮಿಸುತ್ತಿದ್ದಂತೆಯೇ ಇಂಗ್ಲೆಂಡ್ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ ಮೆಕಲಮ್ ನೋಡ ನೋಡುತ್ತಿದ್ದಂತೆಯೇ ಅರ್ಧಶತಕ ಸಿಡಿಸಿದರು.

ಕೇವಲ 18 ಎಸೆತಗಳನ್ನು ಎದುರಿಸಿದ್ದ ಮೆಕಲಮ್ ಬೌಂಡರಿ ಮತ್ತು ಆಕರ್ಷಕ ಸಿಕ್ಸರ್‌ಗಳೊಂದಿಗೆ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅರ್ಧ ಶತಕ ಸಿಡಿಸಿದ ಬಳಿಕವೂ ತಣ್ಣಗಾಗದ ಮೆಕಲಮ್ ಮತ್ತೆ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರೆಸಿದ್ದರು. ಈ ಹಂತದಲ್ಲಿ ದಾಳಿಗಿಳಿದ ಇಂಗ್ಲೆಂಡ್‌ನ ವೋಕ್ಸ್ ಅವರು ಮೆಕಲಮ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು. ಅಂತಿಮವಾಗಿ ಮೆಕಲಮ್ ಕೇವಲ 25 ಎಸೆತಗಳಲ್ಲಿ 77 ರನ್ ಸಿಡಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಅವರ ಈ ಮೊತ್ತದಲ್ಲಿ ಒಟ್ಟು 8 ಬೌಂಡರಿ ಮತ್ತು 7 ಸಿಕ್ಸರ್ ಗಳಿದ್ದವು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕೇವಲ 123ರನ್ ಗಳಿಗೇ ಸರ್ವ ಪತನ ಕಂಡಿತು. ನ್ಯೂಜಿಲೆಂಡ್ ತಂಡದ ಬೌಲರ್ ಗಳಾದ ಟೀಮ್ ಸೌಥಿ ಮತ್ತು ಮಿಲ್ನೆ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಮಧ್ಯಮ ಕ್ರಮಾಂಕದ ಆಟಗಾರ ಜೆ ರೂಟ್ (46ರನ್) ಅವರನ್ನು ಹೊರತು ಪಡಿಸಿ ಇಂಗ್ಲೆಂಡ್ ತಂಡದ ಬೇರಾವುದೇ ಆಟಗಾರ ನ್ಯೂಜಿಲೆಂಡ್ ಬೌಲರ್‌ಗಳಿಗೆ ಪ್ರತಿರೋಧ ತೋರುವ ಧೈರ್ಯ ಮಾಡಲೇ ಇಲ್ಲ. ಅಂತಿಮವಾಗಿ ಇಂಗ್ಲೆಂಡ್ ತಂಡ 123 ರನ್‌ಗಳಿಗೆ ಆಲ್ ಔಟ್ ಆಯಿತು.

ನ್ಯೂಜಿಲೆಂಡ್ ಪರ ಟೀಮ್ ಸೌಥಿ 7 ವಿಕೆಟ್, ಎಎಫ್ ಮಿಲ್ನೆ, ಬೌಲ್ಟ್ ಮತ್ತು ವೆಟ್ಟೋರಿ ತಲಾ 1 ವಿಕೆಟ್ ಕಬಳಿಸಿ ಇಂಗ್ಲೆಂಡ್ ಪತನಕ್ಕೆ ಕಾರಣವಾದರು.

SCROLL FOR NEXT