ಬೆಂಗಳೂರು: ಏರೋ ಇಂಡಿಯಾದ ಮೊದಲ ಮೂರು ದಿನ ವಿಮಾನಗಳ ಸದ್ದಾದರೆ, ಶನಿವಾರ ಜನಸಾಗರದ ಎಲ್ಲೆ ಮೀರಿದ ಉತ್ಸಾಹ, ಕಣ್ಣು ಹಾಯಿಸಿದಷ್ಟೂ ದೂರ ಕಾಣಿಸಿದ ಜನಜಾತ್ರೆಯು ಉಕ್ಕಿನ ಹಕ್ಕಿಗಳ ಉತ್ಸವದ ಮೆರುಗು ಹೆಚ್ಚಿಸಿತು.
ಆರಂಭದ ಮೂರು ದಿನಗಳಲ್ಲಿ ಉದ್ದಿಮೆಗಳ ವ್ಯಾವಹಾರಿಕ ಮಾತುಕತೆ, ಸಭೆಗೆ ಸೀಮಿತವಾಗಿದ್ದ ಏರೋ ಇಂಡಿಯಾ ಸಾರ್ವಜನಿಕರಿಗೆ ಶನಿವಾರ ತೆರೆದುಕೊಂಡಿತ್ತು. ಭಾರತೀಯ ವಾಯುಸೇನೆಯ ಖ್ಯಾತ ಸೂರ್ಯ ಕಿರಣ ವೈಮಾನಿಕ ತಂಡದ ಅನುಪಸ್ಥಿತಿಯಿದ್ದರೂ ಬೆಳಗ್ಗೆಯಿಂದಲೇ ಸೂರ್ಯನ ಕಿರಣಗಳ ಪ್ರಭಾವಳಿ ಜೋರಾಗಿಯೇ ಇತ್ತು. ಇದ್ಯಾವುದಕ್ಕೂ ಜಗ್ಗದ ಜನರು ಯುದ್ಧ ವಿಮಾನಗಳನ್ನೇ ಬೆಚ್ಚಿಸುವ ರೀತಿಯಲ್ಲಿ ಸೇರಿದರು.
ಜನರೆಲ್ಲರೂ ಉತ್ಸಾಹದ ಕೇಕೆ ಹಾಕಿದರೆ ವಿಮಾನದ ಸದ್ದೇ ಅಡಗುವಂಥ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕ ಪ್ರವೇಶ ಹಾಗೂ ಪ್ರದರ್ಶನ ಮಳಿಗೆ ಪ್ರವೇಶ ಎಂಬ ಎರಡು ಪಾಸ್‍ಗಳ ಮೂಲಕ ಜನರಿಗೆ ಏರೋ ಇಂಡಿಯಾ ನೋಡಲು ಅವಕಾಶ ನೀಡಲಾಗಿತ್ತು. ರು.600 ಟಿಕೆಟ್‍ನ ಪ್ರವೇಶವಿರುವ ತಾಣದಲ್ಲಿ ಸರಿಸುಮಾರು 75 ಸಾವಿರ ಜನರು ಸೇರಿದ್ದರೆ, ಪ್ರದರ್ಶನ ಮಳಿಗೆ ಜಾಗದಲ್ಲಿ 30 ಸಾವಿರಕ್ಕೂ ಅಧಿಕ ಜನರು ನೆರೆದಿದ್ದರು. ಆಗಸದಲ್ಲಿ ವಿಮಾನಗಳ ಸಾಹಸ ಪ್ರದರ್ಶನ ನೋಡಿ ಜನರು ನಿಬ್ಬೆರಗಾದರು. ಕೆಲವರು ಕಿರುಚಿಕೊಂಡರೆ, ಮಕ್ಕಳು ಖುಷಿಯಿಂದ ಕುಣಿದಾಡಿದರು.
ಭಾನುವಾರ ಕೊನೆಯ ದಿನವಾದ್ದರಿಂದ ಸುಮಾರು 2 ಲಕ್ಷ ಜನ ಸೇರುವ ಸಾಧ್ಯತೆಯಿದೆ ಎಂದು ಆಯೋಜಕರು ಹೇಳಿದ್ದಾರೆ. ಭರ್ಜರಿ ಜನಸ್ತೋಮವೇ ಏರೋ ಇಂಡಿಯಾ-2015ಕ್ಕೆ ಬೀಳ್ಕೊಡುಗೆ ನೀಡುವ ಸಾಧ್ಯತೆಯಿದೆ.
ಮಳಿಗೆಗಳು ಖಾಲಿ
ಉದ್ದಿಮೆಗಳ ಜತೆಗಿನ ಮಾತುಕತೆಗಳು ಶುಕ್ರವಾರವೇ ಕೊನೆಗೊಳ್ಳುತ್ತಿದ್ದಂತೆ ಕೆಲಮಳಿಗೆಗಳನ್ನು ಖಾಲಿ ಮಾಡಲಾಗುತ್ತಿದೆ. ಸಾರ್ವಜನಿಕರ ಭೇಟಿಯಿಂದ ಉದ್ಯಮಿಗಳಿಗೆ ಯಾವುದೇ ಲಾಭ ಆಗುವುದೂ ಇಲ್ಲ. ಆದರೆ ಬೃಹತ್ ಉದ್ಯಮಗಳ ಮಳಿಗೆಗಳು ಹಾಗೆಯೇ ಇವೆ ಹಾಗೂ ಜನಾಕರ್ಷಣೆಯ ಮಳಿಗೆಗಳನ್ನು ಉಳಿಸಿಕೊಳ್ಳಲಾಗಿದೆ.
ಈ ಬಾರಿ ಸೆಲ್ಫಿ ಗೋಳು
ಸ್ಮಾರ್ಟ್ ಫೋನ್‍ಗಳ ಭರಾಟೆಯಿಂದ ಸೆಲ್ಫಿ ಹೆಚ್ಚಾಗಿದೆ. ಪ್ರತಿಯೊಬ್ಬರೂ ವಿಮಾನದ ಜತೆ ಸೆಲ್ಫಿ ತೆಗೆದುಕೊಳ್ಳಲು ಹರಸಾಸಹ ಮಾಡುತ್ತಿರುವುದು ಸಾಮಾನ್ಯವಾಗಿತ್ತು. ಹಾರಾಡುವ ವಿಮಾನ ಹಾಗೂ ಇವರ ಮುಖ ಒಂದೇ ಫ್ರೇಮ್ ನಲ್ಲಿ ಸಿಗುವುದು ಕಷ್ಟವಾದ್ದರಿಂದ ಸಾಕಷ್ಟು ಜನ ಇದಕ್ಕಾಗಿ ಗೋಳಾಡಿದರು. ಇನ್ನು ಕ್ಯಾಮೆರಾಗಳನ್ನು ಹೊಂದಿದ್ದವರಿಗೆ ದೊಡ್ಡ ಹಬ್ಬವಿದ್ದಂತೆ. ಉಕ್ಕಿನ ಹಕ್ಕಿಗಳ ನಾನಾ ಭಂಗಿಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ದಿನವಿಡೀ ಬಿಸಿಲಲ್ಲಿ ಕುಳಿತು ಹೈರಾಣಾದವರಿದ್ದಾರೆ.
ಊಟದ ಅವ್ಯವಸ್ಥೆ
ಸುಮಾರು 30 ಸಾವಿರ ಜನರಿದ್ದ ಪರಿಣಾಮವಾಗಿ ಪ್ರದರ್ಶನ ವಲಯದ ಫುಡ್ ಕೋರ್ಟ್‍ನಲ್ಲಿ ಸಾರ್ವಜನಿಕರು ಊಟ ತಿಂಡಿಗಾಗಿ ಕಷ್ಟಪಡಬೇಕಾಯಿತು. ಒಂದೆಡೆ ಮಳಿಗೆಗಳ ಸಂಖ್ಯೆ ಕಡಿಮೆಯಿದ್ದರೆ, ಮತ್ತೊಂದೆಡೆ ಆಹಾರದ ಗುಣಮಟ್ಟವೂ ಸರಿಯಿರಲಿಲ್ಲ. ಜತೆಗೆ ಅಲ್ಲಿ ಹಾಕಿದ್ದ ಟೇಬಲ್, ಕುರ್ಚಿಗಳ ಸ್ವಚ್ಛತೆ ಕಾಪಾಡಿ ಕೊಳ್ಳಲು ಆಯೋಜಕರು ವಿಫಲರಾಗಿದ್ದರು. ಇದೇ ಅವ್ಯವಸ್ಥೆ ಸಾಮಾನ್ಯ ಪ್ರವೇಶದ ವಲಯದಲ್ಲೂ ಕಂಡುಬಂತು.