ಡ್ಯುನೆಡಿನ್: ಡ್ಯುನೆಡಿನ್ ನಲ್ಲಿ ಭಾನುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ಎದುರು 4 ವಿಕೆಟ್‌ಗಳ ಪ್ರಯಾಸದ ಗೆಲುವು ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಆಫ್ಘಾನಿಸ್ತಾನ ತಂಡ 49.4 ಓವರ್‌ಗಳಲ್ಲಿ 232 ರನ್‌ಗಳ ಸಾಧಾರಣ ಮೊತ್ತಕ್ಕೆ ತನ್ನ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಫ್ಘನ್ ಪರ ಅಸರ್ 54 ರನ್ , ಶೆನ್ವಾರಿ 38ರನ್, ಮಿರ್‌ವೈಸ್ ಅಶ್ರಫ್ 28 ರನ್ ಮತ್ತು ಜಾವೆದ್ ಆಹಮದಿ 24 ರನ್ ಗಳಿಸಿದರು. ಉಳಿದ ಯಾವ ಬ್ಯಾಟ್ಸಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಧೈರ್ಯ ಮಾಡಲಿಲ್ಲ. ಲಂಕಾ ಪರ ಮಾಲಿಂಗಾ ಮತ್ತು ಮ್ಯಾಥ್ಯೂಸ್ ತಲಾ 3, ಲಕ್ಮಲ್ 2 ವಿಕೆಟ್ ಪಡೆದರೆ, ತೀಸ್ರಾ ಪರೇರಾ ಮತ್ತು ರಂಗನಾ ಹೇರಾತ್ ತಲಾ 1 ವಿಕೆಟ್ ಪಡೆದರು.
ಆಫ್ಘನ್ ತಂಡ ನೀಡಿದ 232 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ್ದ ಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಅಫ್ಘನ್ ಬೌಲರ್‌ಗಳು ಸಫಲರಾದರು. ಶೂನ್ಯಕ್ಕೆ ಮೊದಲ ವಿಕೆಟ್ ಕಳೆದುಕೊಂಡ ಲಂಕಾ 18 ರನ್ ಆಗುವಷ್ಟರಲ್ಲಿಯೇ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಲಂಕಾ ತಂಡದ ಮಾಜಿ ನಾಯಕ ಜಯವರ್ಧನೆ ,ಮ್ಯಾಥ್ಯೂಸ್ ಮತ್ತು ಪರೇರಾ ಅವರು ಸಮಯೋಚಿತ ಆಟವಾಡಿ ಲಂಕಾವನ್ನು ಗೆಲುವಿನ ಗೆರೆ ದಾಟಿಸಿದರು.
51 ಕ್ಕೆ ಮೊದಲ 4 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕ್ರೀಸ್‌ಗಿಳಿದ ಜಯವರ್ಧನೆ ರಕ್ಷಣಾತ್ಮಕ ಆಟವಾಡಿ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಉತ್ಸಾಹ ತುಂಬಿದರು. ಬಳಿಕ ಅವರು 100 ರನ್‌ಗಳಿಸಿ ಔಟಾದರು. ಜಯವರ್ಧನೆ ಗೆ ಉತ್ತಮ ಸಾಥ್ ನೀಡಿದ ಮ್ಯಾಥ್ಯೂಸ್ 44 ರನ್‌ಗಳಿಸಿ ಔಟಾದರು. ಆನಂತರ ಕ್ರೀಸ್‌ಗಿಳಿದ ಪರೇರಾ 26 ಎಸೆತಗಳಲ್ಲಿ 47 ರನ್ ಗಳಿಸಿ ತಂಡವನ್ನು ಜಯದ ಸಮೀಪಕ್ಕೆ ಕರೆದೊಯ್ದರು. ಅಫ್ಘನ್ ಪರ ಹಮೀದ್ ಹಸನ್ 3 ವಿಕೆಟ್, ದೌಲತ್ ಮತ್ತು ಶಾಪೂರ್ ತಲಾ 1 ವಿಕೆಟ್ ಪಡೆದರು.
ಸಂಕಷ್ಟದ ಸಮಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಜಯವರ್ಧನೆ ಅರ್ಹವಾಗಿಯೇ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.