ಬ್ರಿಸ್ಬೇನ್: ಮಧ್ಯಮ ಕ್ರಮಾಂಕದಲ್ಲಿ ಗ್ಯಾಲಿ ವಿಲ್ಸನ್ ಮತ್ತು ಕೆವಿನ್ ಓಬ್ರಿಯಾನ್‍ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಐರ್ಲೆಂಡ್ ತಂಡ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲವು ದಾಖಲಿಸಿದೆ.
ಬ್ರಿಸ್ಬೇನ್ ಮೈದಾನದಲ್ಲಿ ಬುಧವಾರ ನಡೆದ `ಬಿ' ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ತಂಡ 2 ವಿಕೆಟ್‍ಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು ಸೋಲಿಸಿತು.
ಗೆಲ್ಲಲು ಯುಎಇ ನೀಡಿದ್ದ 279 ರನ್‍ಗಳ ಗುರಿ ಬೆಂಬತ್ತಿದ್ದ ಐರ್ಲೆಂಡ್ ಇನ್ನು 4 ಎಸೆತಗಳು ಉಳಿದಿರುವಂತೆ 8 ವಿಕೆಟ್ ನಷ್ಟಕ್ಕೆ ದಡ ಸೇರುವ ಮೂಲಕ ರೋಚಕ ಗೆಲವು ತನ್ನದಾಗಿಸಿಕೊಂಡಿತು. ಆರಂಭದ ಒಂದು ಹಂತದಲ್ಲಿ ಐರ್ಲೆಂಡ್ 97 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಆಂತಕಕ್ಕೆ ಒಳಗಾಗಿತ್ತು. ಆದರೆ, ವಿಲ್ಸನ್ ಮತ್ತು ಕೆವಿನ್ ಸೂಕ್ತ ಸಮಯದಲ್ಲಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಅಂತಿಮವಾಗಿ ತಂಡಕ್ಕೆ ಗೆಲವಿನ ಸಿಹಿ ಉಣಬಡಿಸಿದರು.
ಯುಎಇ ಬೌಲರ್‍ಗಳು ಉತ್ತಮ ಪ್ರದರ್ಶನವನ್ನೇ ನೀಡಿದರು. ಆದರೂ, ವಿಲ್ಸನ್ ಮತ್ತು ಕೆವಿನ್ ಅಬ್ಬರ ತಡೆಯಲಾಗದೇ ಅಂತಿಮವಾಗಿ ತಂಡ ಗೌರವಯುತ ಸೋಲು ಒಪ್ಪಿಕೊಳ್ಳಬೇಕಾಯಿತು.
ಅನ್ವರ್ ಶತಕ, ಯುಎಇ ಸ್ಪರ್ಧಾತ್ಮಕ ಮೊತ್ತ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಯುಎಇ ನಿಗದಿತ 50 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 278 ರನ್‍ಗಳ ಸ್ಪರ್ಧಾತ್ಮಕ ಮೊತ್ತಗಳಿಸಿತು. ಆರನೇ ಕ್ರಮಾಂಕದಲ್ಲಿ ಆಡಲಿಳಿದ ಶಾಯಿಮಾನ್ ಅನ್ವರ್, ಆಕರ್ಷಕ ಶತಕ ಸಿಡಿಸಿ ತಮ್ಮ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ಅನ್ವರ್‍ಗೆ ಇದು ಚೊಚ್ಚಲ ಶತಕವಾಗಿದೆ. ಅವರ ಈ ಮುಂಚಿನ ಗರಿಷ್ಠ ಮೊತ್ತ 67 ರನ್. ಇದೇ ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧದ ತಮ್ಮ ಆರಂಭಿಕ ಪಂದ್ಯದಲ್ಲಿ ಶಾಯಿಮಾನ್ ಈ ಮೊತ್ತ ಗಳಿಸಿದ್ದರು.
ಅಲ್ಲದೆ ವಿಶ್ವಕಪ್‍ನಲ್ಲಿ ಯುಎಇ ಆಟಗಾರನೊಬ್ಬ ಶತಕದ ಸಾಧನೆ ಮಾಡಿದ್ದು ಇದೇ ಮೊದಲು. ಇವರಿಗೆ ಉತ್ತಮ ಬೆಂಬಲ ನೀಡಿದ ಅಮ್ಜದ್ ಜಾವೆದ್ ಕೂಡ ಉಪಯುಕ್ತ 42 ರನ್‍ಗಳ ಕಾಣಿಕೆ ನೀಡಿದರು. ಐರ್ಲೆಂಡ್ ಪರ ಉತ್ತಮ ದಾಳಿ ನಡೆಸಿದ ಸೊರೆನ್ಸೇನ್, ಕ್ಯೂಸ್ಯಾಕ್, ಸ್ಟಿರ್ಲಿಂಗ್ ಮತ್ತು ಕೆವಿನ್ ತಲಾ 2 ವಿಕೆಟ್ ಪಡೆದರು. ಈ ಪೈಕಿ ಕರಾರುವಾಕ್ ದಾಳಿ ನಡೆಸಿದ ಸ್ಟಿರ್ಲಿಂಗ್ ತಮ್ಮ 10 ಓವರುಗಳ ಕೋಟಾದಲ್ಲಿ ಕೇವಲ 27 ರನ್ ನೀಡಿ ಗಮನ ಸೆಳೆದರು.
ಬೇಲ್ಸ್ ಕಣ್ಣಾಮುಚ್ಚಾಲೆ
ಯುಎಇ ನೀಡಿದ್ದ ಮೊತ್ತವನ್ನು ಬೆನ್ನಟ್ಟಲು ಐರ್ಲೆಂಡ್ ತಂಡ ಕ್ರೀಸ್‍ಗಿಳಿದಿದ್ದಾಗ ನಡೆದ ಘಟನೆಯಿದು. ಅಮ್ಜದ್ ಜಾವೇದ್ ಎಸೆತದಲ್ಲಿ ಬ್ಯಾಟ್ ಬೀಸಿದ ಎಡ್ ಜೋಯ್ಸ್ ಅವರ ಕಣ್ತಪ್ಪಿಸಿ ಸಾಗಿದ ಚೆಂಡು ವಿಕೆಟನ್ನು ಸವರಿಕೊಂಡು ಹೋಯಿತು. ಇದಕ್ಕೆ ಸಾಕ್ಷಿಯಾಗಿ ವಿಕೆಟ್‍ಗಳ ಮೇಲೆ ಇಡಲಾಗಿದ್ದ ಝಿಂಗ್ ಬೇಲ್ಸ್‍ಗಳು ಕೊಂಚ ಮೇಲೆದ್ದು ಬೇಲ್ಸ್ ನ ದೀಪ ಬೆಳೆಗ ತೊಡಗಿದವು. ಆದರೆ ಬೇಲ್ಗಳು ಪುನಃ ಸ್ವಸ್ಥಾನಕ್ಕೆ ಮರಳಿ ವಿಕೆಟ್ ಮೇಲೆ ಕುಳಿತು ಬಿಟ್ಟವು. ಕ್ಷಣಾರ್ಧದಲ್ಲಾದ ಈ ಘಟನೆ ಎಲ್ಲರನ್ನೂ ಚಕಿತಗೊಳಿಸಿತು. ಅಂಪೈರ್‍ಗಳೂ ವಿಕೆಟ್ ಬಳಿ ಬಂದು ಪರೀಕ್ಷಿಸಿದಾಗ ಅದೃಷ್ಟವಶಾತ್ ಜೋಯ್ಸ್ ಬಚಾವಾಗಿದ್ದು ಗೊತ್ತಾಯಿತು.
ಕೆಲವು ಆಘಾತಗಳ ಹೊರತಾಗಿಯೂ ಚೇಸ್ ಮಾಡುವ ಭರದಲ್ಲಿ ಅನವಶ್ಯಕವಾಗಿ ವಿಕೆಟ್ ಚೆಲ್ಲದೇ ಎಚ್ಚರಿಕೆಯ ಹೆಜ್ಜೆಯಿಟ್ಟಿದ್ದು ಫಲ ನೀಡಿತು. ಮಧ್ಯಮ ಕ್ರಮಾಂಕದ ವಿಲ್ಸನ್ ಹಾಗೂ ಕೆವಿನ್ ತಂಡಕ್ಕೆ ನೆರವಾದರು. ಈ ಜಯ ಖುಷಿ ತಂದಿದೆ.
- ವಿಲಿಯಮ್ ಪೋರ್ಟರ್ ಫೀಲ್ಡ್
ಸ್ಕೋರ್ ವಿವರ
ಯುಎಇ 50 ಓವರುಗಳಲ್ಲಿ 9 ವಿಕೆಟ್‍ಗೆ 278
ಐರ್ಲೆಂಡ್ 49.2 ಓವರುಗಳಲ್ಲಿ 8 ವಿಕೆಟ್‍ಗೆ 279
ಪಂದ್ಯಶ್ರೇಷ್ಠ: ಗ್ಯಾರಿ ವಿಲ್ಸನ್