ಕೇಪ್ ಟೌನ್: ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯವೊಂದು ನೂತನ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ವಿಂಡೀಸ್ ತಂಡದ ಆಟಗಾರ ಕ್ರೇಗ್ ಬ್ರೆತ್ ವೈಟ್ ಕೇವಲ 1 ಬಾಲಿಗೆ 7 ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಕೇಪ್ ಟೌನ್ ನ್ಯೂ ಲ್ಯಾಂಡ್ಸ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಆಟಗಾರ ಕ್ರೇಗ್ ಬ್ರೆತ್ ವೈಟ್ ಅವರು ತಾವು ಎದುರಿಸಿದ ಮೊದಲ ಬಾಲ್ ನಲ್ಲಿಯೇ 7 ರನ್ ಗಳಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆದಿದ್ದಾರೆ.
ದಕ್ಷಿಣ ಆಫ್ರಿಕಾದ ಬೌಲರ್ ಎಸೆದ ಬಾಲ್ ಅನ್ನು ರಕ್ಷಣಾತ್ಮಕವಾಗಿ ಆಡಿದ ಕ್ರೇಗ್ ಬ್ರೆತ್ ವೈಟ್ ಈ ವೇಳೆ ಎರಡು ರನ್ ಓಡಿ, ಮೂರನೇ ರನ್ ಗಾಗಿ ಓಡುತ್ತಿದ್ದರು. ಈ ವೇಳೆ ದಕ್ಷಿಣ ಅಫ್ರಿಕಾ ತಂಡದ ಆಟಗಾರ ಎಬಿಡಿವಿಲಿಯರ್ಸ್ ಅವರು ಬ್ರೆತ್ ವೈಟ್ ಅವರನ್ನು ರನೌಟ್ ಮಾಡುವ ಭರದಲ್ಲಿ ಬಾಲ್ ಅನ್ನು ವಿಕೆಟ್ ನತ್ತ ಎಸೆದರು. ಆದರೆ ಬಾಲ್ ಗುರಿ ತಪ್ಪಿ ಬೌಡರಿ ಗೆರೆ ದಾಟಿತ್ತು. ಆ ಮೂಲಕ ಕ್ರೇಗ್ ಬ್ರೆತ್ ವೈಟ್ ಕೇವಲ 1 ಎಸೆತದಲ್ಲಿ 7 ರನ್ ಗಳಿಸಿದ ದಾಖಲೆಗೆ ಭಾಜನರಾದರು.
ಕ್ರಿಕೆಟ್ ಪಂಡಿತರ ಪ್ರಕಾರ ಇದೊಂದು ನೂತನ ದಾಖಲೆಯಾಗಿದ್ದು, ಓರ್ವ ಬ್ಯಾಟ್ಸ್ ಮನ್ ತಾನು ಎದುರಿಸಿದ ಮೊದಲ ಬಾಲ್ ನಲ್ಲಿ 7 ರನ್ ಗಳಿಸಿರುವುದು ಇದೇ ಮೊದಲಂತೆ. ದುರಾದೃಷ್ಟವಶಾತ್ ಈ ಇನ್ನಿಂಗ್ಸ್ ನಲ್ಲಿ ಕ್ರೇಗ್ ಬ್ರೆತ್ ವೈಟ್ ಕೇವಲ 16 ರನ್ ಗಳಿಸಿ ಔಟಾದರು. ಮೂರು ಪಂದ್ಯಗಳ ಈ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡ 2-0 ಅಂತರದಿಂದ ಕೈ ವಶ ಮಾಡಿಕೊಳ್ಳುವ ಮೂಲಕ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.