ಕ್ರೀಡೆ

ಪಾಕಿಸ್ತಾನ ಇತಿಹಾಸ ಬದಲಿಸಬಲ್ಲದು: ಯೂನಿಸ್ ಖಾನ್

Srinivasamurthy VN

ಇಸ್ಲಾಮಾಬಾದ್: ಪ್ರಸಕ್ತ ಸಾಲಿನ ವಿಶ್ವಕಪ್ ಸರಣಿಯಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನ ತಂಡ ಇತಿಹಾಸವನ್ನು ಬದಲಿಸಬಲ್ಲದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಯೂನಿಸ್ ಖಾನ್ ಹೇಳಿದ್ದಾರೆ.

2015 ಕ್ರಿಕೆಟ್ ವಿಶ್ವಕಪ್ ಸರಣಿಯ ಹಿನ್ನಲೆಯಲ್ಲಿ ಮಾತನಾಡಿದ ಯೂನಿಸ್ ಖಾನ್, 'ಇತಿಹಾಸ ಬದಲಾಗುತ್ತದೆ. ನನ್ನ ಅಭಿಪ್ರಾಯದ ಪ್ರಕಾರ ಪ್ರಸ್ತುತ ಪಾಕಿಸ್ತಾನ ತಂಡ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದು, ಈ ಬಾರಿಯ ಸರಣಿಯಲ್ಲಿ ಭಾರತ ತಂಡವನ್ನು ಮಣಿಸುವ ಸಾಮರ್ಥ್ಯ ಹೊಂದಿದೆ' ಎಂದು ಹೇಳಿದರು.

'ಈ ಹಿಂದೆ ನನ್ನ ಬಗ್ಗೆಯೂ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ನನ್ನ ವೃತ್ತಿ ಜೀವನ ಅಂತ್ಯವಾಯಿತು ಎಂದು ಬಹುತೇಕರು ಟೀಕಿಸಿದ್ದರು. ಆದರೆ ಆ ಸರಣಿಯಲ್ಲಿ ಶತಕ ಬಾರಿಸುವ ಮೂಲಕ ನಾನು ಮತ್ತೆ ಮರಳಿ ಫಾರ್ಮ್‌ಗೆ ವಾಪಸಾದೆ. ಮುಂಬರುವ ವಿಶ್ವಕಪ್ ಸರಣಿಯಲ್ಲಿಯೂ ಇದೇ ಉತ್ತಮ ಫಾರ್ಮ್ ಅನ್ನು ಮುಂದುವರೆಸುವ ವಿಶ್ವಾಸವಿದೆ. ಅಂತೆಯೇ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಲಿದ್ದೇವೆ' ಎಂದು ಯೂನಿಸ್ ಖಾನ್ ಹೇಳಿದರು.

ವಿಶ್ವಕಪ್ ಕ್ರಿಕೆಟ್ ಸರಣಿ ಆರಂಭವಾದ 1975ರಿಂದ ಇವರೆಗೂ ಪಾಕಿಸ್ತಾನ ತಂಡ ಭಾರತ ತಂಡದ ವಿರುದ್ಧ ಗೆಲುವು ಸಾಧಿಸಿಲ್ಲ. ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿದ್ದು, ಪ್ರಸಕ್ತ ಬಾರಿಯ ವಿಶ್ವಕಪ್ ಸರಣಿಯಲ್ಲಿ ಭಾರತದ ವಿರುದ್ಧ ಪಂದ್ಯ ಗೆಲ್ಲುವ ಮೂಲಕ ಪಾಕಿಸ್ತಾನ ಈ ದಾಖಲೆಯನ್ನು ಅಳಿಸಿ ಹಾಕುವ ಹುಮ್ಮಸ್ಸಿನಲ್ಲಿದೆ. ಮುಂಬರುವ ಫೆಬ್ರವರಿಯಲ್ಲಿ ವಿಶ್ವಕಪ್ ಕ್ರಿಕೆಟ್ ಸರಣಿ ಆರಂಭವಾಗಲಿದ್ದು, ಫೆಬ್ರವರಿ 15ರಂದು ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

SCROLL FOR NEXT