ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ಬಿಸಿಸಿಐ ಪದಚ್ಯುತ ಅಧ್ಯಕ್ಷ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಮತ್ತು ರಾಜಸ್ತಾನ ರಾಯಲ್ಸ್‌ನ ಸಹ ಮಾಲೀಕ ರಾಜ್ ಕುಂದ್ರಾ ತಪ್ಪಿತಸ್ಥರು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಪ್ರಕರಣ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದ್ದು, ಬಿಸಿಸಿಐನಲ್ಲಿ ವಾಣಿಜ್ಯ ಹಿತಾಸಕ್ತಿ ಹೊಂದಿರುವ ಶ್ರೀನಿವಾಸನ್ ಅಥವಾ ಇನ್ನಾವೂದೆ ಆಡಳಿತಾಧಿಕಾರಿ ಬಿಸಿಸಿಐ ಹುದ್ದೆಗಳಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ನಲ್ಲಿ ಪ್ರಭಾವ ಬೀರಿದ ಆರೋಪಗಳಿಂದ ಶ್ರೀನಿವಾಸನ್ ಅವರನ್ನು ಕೋರ್ಟ್ ಮುಕ್ತಗೊಳಿಸಿದೆ.
ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಐಪಿಎಲ್‌ನಿಂದ ನಿಷೇಧ ಮಾಡಿ ಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ನೇತೃತ್ವದ ಸುಪ್ರೀಂ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ 35 ಪುಟಗಳ ಮುದ್ಗಲ್ ವರದಿ ಆಧಾರವಾಗಿಟ್ಟುಕೊಂಡು 130 ಪುಟಗಳ ತೀರ್ಪು ಪ್ರಕಟಿಸಿದೆ.
ಮೇಯಪ್ಪನ್ ಹಾಗೂ ಕುಂದ್ರಾ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಕೋರ್ಟ್ ತೀರ್ಪು ನೀಡಿದೆ. ಆದರೆ ಶಿಕ್ಷೆ ಪ್ರಮಾಣದ ಬಗ್ಗೆ ಹೊಸದಾಗಿ ಸ್ಥಾಪಿಸಲಾದ ಪ್ರತ್ಯೇಕ ಸಮಿತಿ ನಿರ್ಧರಿಸಲಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸನ್ ವಿರುದ್ಧದ ಆರೋಪಗಳು ಸಾಬೀತಾಗಿಲ್ಲದ ಕಾರಣ ಅವರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ.
ಶ್ರೀನಿವಾಸನ್ ವಿರುದ್ಧ ತಪ್ಪುಗಳನ್ನು ಮುಚ್ಚಿಟ್ಟ ಆರೋಪಗಳಿದ್ದು ಅವುಗಳಿಗೆ ಪೂರಕವಾದ ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ಶ್ರೀನಿವಾಸನ್‌ರಿಗೆ ಪ್ರಕರಣದಿಂದ ವಿನಾಯಿತಿ ನೀಡಲಾಗಿದೆ. ಆದರೆ ಅವರು ಬಿಸಿಸಿಐ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಮುಂದಿನ ಆರು ತಿಂಗಳಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯ ಆಕಾಂಕ್ಷಿಯಾಗಿದ್ದ ಶ್ರೀನಿವಾಸನ್ ಅವರಿಗೆ ಭಾರಿ ಹಿನ್ನಡೆಯಾಗಿದೆ.
ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು 2013ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ್ದರು. ನ.3ರಂದು ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಕೋರ್ಟಿಗೆ ಸಲ್ಲಿಸಲಾಗಿತ್ತು.