ಪರ್ತ್: ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 112 ರನ್ನುಗಳಿಂದ ಭರ್ಜರಿ ಜಯ ಗಳಿಸಿದೆ.
ವಾಕಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ಗೆ ಗೆಲ್ಲಲ್ಲು 279 ರನ್ಗಳ ಗುರಿ ನೀಡಿತು. ಈ ಮೊತ್ತವನ್ನು ಬೆನ್ನತ್ತಿದ ಆಂಗ್ಲರು ಕೇವಲ 166 ರನ್ನಿಗೆ ಆಲೌಟ್ ಆಗಿದ್ದು, ಇಂಗ್ಲೆಂಡ್ ಪರ ರವಿ ಬೊಪಾರ ಗಳಿಸಿದ 33 ರನ್ ಗಳಷ್ಟೇ ಇನ್ನಿಂಗ್ಸ್'ನ ಅತ್ಯಧಿಕ ಸ್ಕೋರ್ ಆಗಿದೆ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್'ನಲ್ಲಿ 8 ವಿಕೆಟ್ ನಷ್ಟಕ್ಕೆ 278 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಗ್ಲೆನ್ ಮ್ಯಾಕ್ಸ್ ವೆಲ್, ಮಿಷೆಲ್ ಮಾರ್ಷ್ ಮತ್ತು ಜೇಮ್ಸ್ ಫಾಲ್ಕ್ ನರ್ ಭರ್ಜರಿ ಅರ್ಧಶತಕ ಗಳಿಸಿ ತಂಡಕ್ಕೆ ಉತ್ತಮ ಮೊತ್ತ ತಂದು ಕೊಟ್ಟರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಮ್ಯಾಕ್ಸ್ ವೆಲ್ ಕೇವಲ 5 ರನ್ನಿಂದ ಶತಕ ವಂಚಿತರಾದರು. ಫಾಲ್ಕ್'ನರ್ ಕೇವಲ 24 ಬಾಲ್'ಗೆ ಅರ್ಧಶತಕ ಬಾರಿಸಿ ತಂಡದ ಸ್ಕೋರು 250 ರನ್ ಗಡಿದಾಟುವಂತೆ ಮಾಡಿದರು.
ಬ್ಯಾಟಿಂಗ್'ನಲ್ಲಿ ಆರ್ಭಟಿಸಿದ್ದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್'ವೆಲ್ ಬೌಲಿಂಗ್'ನಲ್ಲಿ 4 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠರಾದರು. ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಮಿಷೆಲ್ ಸ್ಟಾರ್ಕ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.