ನವದೆಹಲಿ: ಐಪಿಎಲ್ ನಲ್ಲಿ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪ ಸಾಬಿತಾಗಿ ಕ್ರಿಕೆಟ್ ನಿಂದ ಆಜೀವ ನಿಷೇಧಕ್ಕೆ ಒಳಗಾಗಿರುವ ರಾಜ್ ಕುಂದ್ರಾ ತಾವು ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ನನ್ನ ವಿರುದ್ಧ ಸಾಕ್ಷಿ ಇಲ್ಲದೇ ಇದ್ದರೂ ಅಪರಾಧಿ ಎಂದು ತೀರ್ಪು ನೀಡಲಾಗಿದೆ ಎಂದು ರಾಜ್ ಕುಂದ್ರಾ ಹೇಳಿದ್ದಾರೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾ.ಲೋಧಾ ಸಮಿತಿ ನೀಡಿರುವ ಅಂತಿಮ ವರದಿಯ ಪ್ರತಿ ಇನ್ನೂ ತಮಗೆ ತಲುಪಿಲ್ಲ. ದೆಹಲಿ ಪೊಲೀಸರಾಗಲಿ ರಾಜಸ್ಥಾನದ ಪೊಲೀಸರಾಗಲಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದಾದ ಅಪರಾಧವನ್ನು ಗುರುತಿಸಿಲ್ಲ ಎಂದು ರಾಜ್ ಕುಂದ್ರಾ ಹೇಳಿದ್ದಾರೆ.
ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ನನ್ನ ವಿರುದ್ಧ ಅಪರಾಧ ಸಾಬೀತಾಗಿರುವುದು ನನ್ನ ಪ್ರಾಮಾಣಿಕತೆಗೆ ಪ್ರಶ್ನಾರ್ಹವಾಗಿದೆ. ನನ್ನ ವಿರುದ್ಧ ಸಾಕ್ಷ್ಯಾಧಾರಗಳಿಲ್ಲದೆ ಇದ್ದರೂ ತನಿಖಾ ತಂಡಕ್ಕೆ ನಾನು ನೀಡಿದ ಸಹಕಾರ ಈಗ ನನಗೇ ಮುಳುವಾಗಿದೆ ಎಂದು ರಾಜ್ ಕುಂದ್ರಾ ತಾವು ನಿರಪರಾಧಿ ಎಂದು ಸಮರ್ಥಿಸಿಕೊಂಡಿದ್ದಾರೆ.
2013ರ ಐಪಿಎಲ್ ಸೀಸನ್ 6ರ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತೀರ್ಪು ಪ್ರಕಟಿಸಿದ್ದ ತನಿಖಾ ಸಮಿತಿ, ಚೆನ್ನೈ ಸೂಪರ್ ಕಿಂಗ್ ತಂಡದ ಮ್ಯಾನೇಜರ್ ಗುರುನಾಥ್ ಮೇಯಪ್ಪನ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಇಬ್ಬರಿಗೂ ಕ್ರಿಕೆಟ್ ನಿಂದ ಅಜೀವ ನಿಷೇಧ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿತ್ತು.