ನವದೆಹಲಿ: ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣಗಳ ಹಿನ್ನೆಲೆಯಲ್ಲಿ, ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಚೆನ್ನೈ ಸೂಪರ್ ಕಿಂಗ್ಸ್(ಸಿ.ಎಸ್.ಕೆ) ಹಾಗೂ ರಾಜಸ್ಥಾನ ರಾಯಲ್ಸ್(ಆರ್.ಆರ್) ತಂಡಗಳು ನಿಷೇಧಗೊಂಡಿದ್ದರೂ ಮುಂದಿನ ಎರಡು ಐಪಿಎಲ್ ಪಂದ್ಯಾವಳಿಗಳಲ್ಲಿ ಎಂಟು ತಂಡಗಳನ್ನೇ ಕಣಕ್ಕಿಳಿಸಲು ಬಿಸಿಸಿಐ ಸನ್ನಾಹ ನಡೆಸಿದೆ.
ಪ್ರತಿ ವರ್ಷ ಐಪಿಎಲ್ ನಲ್ಲಿ ಎಂಟು ತಂಡಗಳು ಕಣಕ್ಕಿಳಿಯುತ್ತವೆ. ಆದರೆ ಸಿ.ಎಸ್.ಕೆ ಆರ್. ಆರ್ ತಂಡಗಳನ್ನು 2 ವರ್ಷ ಕಾಲ ನಿಷೇಧಿಸಿರುವುದರಿಂದ ಮುಂದಿನ ಆವೃತ್ತಿಯಲ್ಲಿ ಕೇವಲ ಆರು ತಂಡಗಳು ಕಣಕ್ಕಿಳಿಯಲಿವೆ. ಹೀಗೆ ಆರು ತಂಡಗಳ ಐಪಿಎಲ್ ಆಡಿಸುವುದರಿಂದ ಬಿಸಿಸಿಐ ಹಲವು ಸಮಸ್ಯೆಗಳಲ್ಲಿ ಸಿಲುಕಲಿದೆ. ಟೂರ್ನಿಯ ಪ್ರಸಾರ ಹಕ್ಕುಗಳನ್ನು ಪಡೆದಿರುವ ವಿವಿಧ ಮಾಧ್ಯಮಗಳು ಈಗಾಗಲೇ ಪ್ರತಿ ಟೂರ್ನಿಯಲ್ಲಿ ಎಂಟು ತಂಡಗಳು ಭಾಗವಹಿಸುವ 60 ಪಂದ್ಯಗಳ ನೇರಪ್ರಸಾರದ ಒಪ್ಪಂದಕ್ಕೆ ಸಹಿ ಹಾಕಿವೆ. ಈಗ ತಂಡಗಳ ಸಂಖ್ಯೆ ಕಡಿಮೆಯಾದರೆ ಬಿಸಿಸಿಗೆ ನಷ್ಟವಾಗುವುದಂತೂ ಖಚಿತ. ಹಾಗಾಗಿ ಈ ಕಷ್ಟದಿಂದ ಪಾರಾಗಲು ಎಂಟು ತಂದಗಳನ್ನೊಳಗೊಂಡ ಐಪಿಎಲ್ ನಡೆಸಲು ಚಿಂತನೆ ನಡೆಸಿವೆ. ಅರ್ಥಾತ್ ಸಿ.ಎಸ್.ಕೆ ಆರ್.ಆರ್ ಬದಲಿಗೆ ಎರಡು ಹೊಸ ಫ್ರಾಂಚೈಸಿಗಳಿಗೋ ಇಲ್ಲವೇ ಈಗಾಗಲೇ ಟೂರ್ನಿಯಲ್ಲಿದ್ದು ಹೊರಹೋಗಿರುವ ಕೊಚ್ಚಿ ಟಸ್ಕರ್ಸ್ ಕೇರಳ ಹಾಗೂ ಪುಣೆ ವಾರಿಯರ್ಸ್ ಗೆ ಮರು ಅವಕಾಶ ಕಲ್ಪಿಸುವ ಮಾತು ಕೇಳಿಬರುತ್ತಿವೆ.
ಈ ನಿಟ್ಟಿನಲ್ಲಿ ಭಾನುವಾರ ಐಪಿಎಲ್ ಆಡಳಿತ ಮಂಡಳಿಯ ಪದಾಧಿಕಾರಿಗಳ ತುರ್ತು ಸಭೆಯನ್ನು ಕರೆಯಲಾಗಿದೆ. ಸಿ.ಎಸ್.ಕೆ, ಆರ್.ಆರ್ ತಂಡಗಳನ್ನು ನಿಷೇಧಿಸಿ ಹೊರದಬಿದ್ದ ನ್ಯಾ.ಆರ್.ಎಂ ಲೋಧಾ ನೇತೃತ್ವದ ಸಮಿತಿ ತೀರ್ಪನ್ನು ಚರ್ಚಿಸಲಾಗುತ್ತದೆ. ಹಾಗೂ ಸಿ.ಎಸ್.ಕೆ, ಆರ್.ಆರ್ ತಂಡಗಳಿಂದ ತೆರವಾದ ಜಾಗವನ್ನು ಭರ್ತಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ. ಜೂ.15 ರ ಸಂಜೆ ಹಾಗೂ ಗುರುವಾರ ಬಳಿಗ್ಗೆ ಬಿಸಿಸಿಐ ಅಧ್ಯಕ್ಷ ಜಗನ್ಮೋಹನ್ ದಾಲ್ಮಿಯಾ ಹಾಗೂ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರು ಭೇಟಿಯಾಗಲಿದ್ದು ಈ ಭೇಟಿಯೂ ಸ್ವಾರಸ್ಯ ಕೆರಳಿಸಿದೆ.