ಕ್ರೈಸ್ಟ್ ಚರ್ಚ್: ಪ್ರತಿಷ್ಠಿತ ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿಯಲ್ಲಿ ಆಘಾತಕಾರಿ ಸೋಲನುಭವಿಸಿ ದ ಸೋಮ್ ದೇವ್ ದೇವ್‍ವರ್ಮನ್ ಭಾರತದ ಪಾಳೆಯದಲ್ಲಿ ತಲ್ಲಣ ಸೃಷ್ಟಿಸಿದರೂ, ಯುವ ಆಟಗಾರ ಯೂಕಿ ಭಾಂಬ್ರಿ ಆ ಸೋಲನ್ನು ಮೆಟ್ಟಿನಿಂತು ಗೆಲುವು ಸಾಧಿಸಿದ್ದು ಮೊದಲ ದಿನದ ಕಾದಾಟವನ್ನು ಸಮಬಲವಾಗಿಸಿತು.
ಶುಕ್ರವಾರ ಇಲ್ಲಿನ ವಿಲ್ಡಿಂಗ್ ಟೆನಿಸ್ ಕೋರ್ಟ್ ಒಳಾಂಗಣದಲ್ಲಿ ಶುರುವಾದ ಡೇವಿಸ್ ಕಪ್ ಏಷ್ಯಾ ಒಷೇನಿಯಾ ಗ್ರೂಪ್ ಒಂದರ ಪಂದ್ಯಾವಳಿಯ ಪುರುಷರ ಮೊದಲೆರಡು ಸಿಂಗಲ್ಸ್ ಪಂದ್ಯಗಳಲ್ಲಿ ಪ್ರವಾಸಿ ಭಾರತ ಹಾಗೂ ನ್ಯೂಜಿಲೆಂಡ್ ತಲಾ 1-1ರ ಸಮಬಲ ಸಾಧಿಸಿದವು. ಮೊದಲು ನಡೆದ ಸಿಂಗಲ್ಸ್ ಪಂದ್ಯದಲ್ಲಿ ಸೋಮ್ದೇವ್ ಅನಿರೀಕ್ಷಿತ ಸೋಲಿಗೆ ಪಕ್ಕಾಗಿ ಆಘಾತ ಅನುಭವಿಸಿದರು.
ವಿಶ್ವ ರ್ಯಾಂಕಿಂಗ್‍ನಲ್ಲಿ 548ನೇ ಶ್ರೇಯಾಂಕ ಹೊಂದಿರುವ ಮೈಕೆಲ್ ವೀನಸ್ ವಿರುದ್ಧ 148ನೇ ಶ್ರೇಯಾಂಕಿತ ಆಟಗಾರ ಸೋಮ್ ದೇವ್6-4, 6-4, 3-6, 3-6, 1-6ರ ಐದು ಸೆಟ್‍ಗಳ ಸೆಣಸಾಟದಲ್ಲಿ ಪರಾಜಿತರಾದರು. 3 ತಾಸು, 43 ನಿಮಿಷಗಳ ಕಾಲ ನಡೆದ ಸುದೀರ್ಘ ಕಾಲದ ಹಣಾಹಣಿಯಲ್ಲಿ ಸೋಮ್ ಮೊದಲೆರಡು ಸೆಟ್‍ಗಳನ್ನು ಗೆದ್ದರಾದರೂ, ಆನಂತರದ ಮೂರೂ ಸೆಟ್ ಗಳಲ್ಲಿ ಆತಿಥೇಯ ಆಟಗಾರನ ಕೈ ಮೇಲಾಯಿತು. ಅಮೆರಿಕದಲ್ಲಿ ನಡೆದ ಎಟಿಪಿ ಚಾಲೆಂಜರ್ಸ್‍ನಲ್ಲಿ ಗೆಲುವು ಸಾಧಿಸಿದ ಹುರುಪಿನಲ್ಲಿ ಇಲ್ಲಿಗೆ ಆಗಮಿಸಿದ್ದ ಸೋಮ್ ಆಟವನ್ನು ಉತ್ತಮವಾಗಿ ಆರಂಭಿಸಿದರೂ, ಕ್ರಮೇಣ ಮಂಕಾದರು. ಮೊದಲೆರಡು ಸೆಟ್‍ಗಳಲ್ಲಿನ ಸೋಲಿನ ಮಧ್ಯೆಯೂ ಸ್ಥಳೀಯರ ಅಪಾರ ಪ್ರೊತ್ಸಾಹದ ಲಾಭ ಪಡೆದ ವೀನಸ್, ಪ್ರವಾಸಿಗರಿಗೆ ಆಘಾತ ನೀಡಿದರು.
ಸೋಮ್ ಸೋಲಿನಿಂದಾಗಿ ಭಾರತ ಆರಂಭದಲ್ಲೇ ಹಿನ್ನಡೆ ಅನುಭವಿಸಿದ್ದರಿಂದ ಒಂದಷ್ಟು ಕಸಿವಿಸಿ ಉಂಟಾಯಿತು. ಆದರೆ ಎರಡನೇ ಪಂದ್ಯದಲ್ಲಿ ಯೂಕಿ ಭಾರತಕ್ಕೆ ನಿರಾಸೆಯನ್ನು ಉಂಟುಮಾಡಲಿಲ್ಲ. ಕಿವೀಸ್ ಆಟಗಾರ ಜೋಸ್ ಸ್ಟಾಥಮ್ ವಿರುದ್ಧ ಚೇತೋಹಾರಿ ಆಟವಾಡಿದ ಯೂಕಿ, 6-2, 6-1, 6-3ರ ನೇರಸೆಟ್‍ಗಳ ಸುಲಭ ಜಯ ಪಡೆದರು. ಆರಂಭದಿಂದಲೇ ಆಕ್ರಮಣಕಾರಿ ಹೋರಾಟ ನಡೆಸಿದ ಯೂಕಿ ಭಾಂಬ್ರಿ, 3-2ರ ಮುನ್ನಡೆ ಕಾಯ್ದುಕೊಂಡರು. ಮೂರೂ ಸೆಟ್‍ಗಳಲ್ಲಿ ಇದೇ ಪ್ರಾಬಲ್ಯ ಮೆರೆದ ಯೂಕಿ, ಜೋಸ್ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.
ಶನಿವಾರ ಡಬಲ್ಸ್ ಪಂದ್ಯ ನಡೆಯಲಿದ್ದು, ರೋಹನ್ ಬೋಪಣ್ಣ ಹಾಗೂ ಸಾಕೇತ್ ಮೈನೇನಿ ಜೋಡಿ ಮಾರ್ಕುಸ್ ಡೇನಿಯಲ್ ಹಾಗೂ ಆರ್ಟೆಮ್ ಸಿಟಾಕ್ ವಿರುದ್ಧ ಸೆಣಸಲಿದೆ. ಈ ಪಂದ್ಯಾವಳಿಯಲ್ಲಿ ಜಯಶಾಲಿಯಾದವರು ಸೆಪೆಂಬರ್‍ನಲ್ಲಿ ನಡೆಯಲಿರುವ ವಿಶ್ವ ಗುಂಪು ಪ್ಲೇ ಆಫ್ ಗೆ ಪ್ರವೇಶ ಪಡೆಯಲಿದ್ದಾರೆ.