ಕ್ರೀಡೆ

ಐಪಿಎಲ್ ಸಿಓಓ ಸುಂದರ್ ರಾಮನ್ ಕೇವಲ ನೌಕರ

Mainashree

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿರುವ ಆರೋಪ ಹೊತ್ತು ವಿವಾದಕ್ಕೆ ಸಿಲುಕಿರುವ ಐಪಿಎಲ್ ಮುಖ್ಯ ಆಡಳಿತಾಧಿಕಾರಿ ಸುಂದರ್ ರಾಮನ್ ಭವಿಷ್ಯದ ಕುರಿತು ಆತುರದ ನಿರ್ಧಾರಕ್ಕೆ ಮುಂದಾಗುವುದಿಲ್ಲ.

ಅವರು ಕೇವಲ ಬಿಸಿಸಿಐನಲ್ಲಿ ನೌಕರನೇ ಹೊರತು ನಿರ್ಧಾರ ಕೈಗೊಳ್ಳುವ ಅಧಿಕಾರಿಯಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ. ರಾಮನ್ ವಿರುದ್ಧ ಯಾವುದೇ ತೀರ್ಪು ಬಂದಿಲ್ಲ. ಇನ್ನೂ ತನಿಖೆ ನಡೆಯುತ್ತಿದೆ. ನಾವು ಅಧಿಕಾರ ವಹಿಸಿಕೊಂಡಾಗ ರಾಜಸ್ಥಾನ ಹಾಗೂ ಚೆನ್ನೈ ತಂಡಗಳ ವಿರುದ್ಧ ತನಿಖೆ ನಡೆಯುತಿತ್ತು.

ಲೋಧಾ ಸಮಿತಿ ವರದಿ ಬರುವವರೆಗೂ ಕಾದೆವು. ವರದಿ ಬಂದ ಮೇಲೆ ಆ ಕುರಿತು ಮುಂದಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಈಗ ಆತುರವಾಗಿ ರಾಮನ್ ವಿರುದ್ಧ ಕ್ರಮ ಕೈಗೊಳ್ಳಲು ಹೇಗೆ ಸಾಧ್ಯ ಎಂದು ಅನುರಾಗ್ ತಿಳಿಸಿದರು. ಸುಂದರ್ ರಾಮನ್ ಮಂಡಳಿಯ ನೌಕರರಾಗಿದ್ದಾರೆ.

ಮಂಡಳಿಯ ತೀರ್ಮಾನ ಕೈಗೊಳ್ಳಲು ಅವರಿಗೆ ಅಧಿಕಾರವಿಲ್ಲ. ಐಪಿಎಲ್ ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳಲಿದ್ದು, ನೌಕರರು ನಿರ್ಧಾರ ಕೈಗೊಳ್ಳುವುದಿಲ್ಲ. ಆಡಳಿತ ಮಂಡಳಿಯ ನಿರ್ಧಾರವನ್ನು ಅವರು ಪಾಲಿಸುತ್ತಾರಷ್ಟೆ ಎಂದರು.

ಇಲ್ಲಿ ಪ್ರಮುಖವಾಗಿ ತಂಡಗಳು ಅಮಾನತುಗೊಂಡಿವೆ ಹೊರತು ವಜಾಗೊಂಡಿಲ್ಲ. ನಾವು ಕಾರ್ಯಕಾರಿ ಸಮಿತಿ ರಚನೆ ಮಾಡಿದ್ದೇವೆ. ಆ ಸಮಿತಿ ವರದಿಗಾಗಿ ಕಾಯುತ್ತಿದ್ದೇವೆ. ಸದ್ಯಕ್ಕೆ ಐಪಿಎಲ್ 9ನೇ ಆವೃತ್ತಿ ಯಶಸ್ವಿ ಆಯೋಜನೆಯತ್ತ ಗಮನ ಹರಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

SCROLL FOR NEXT