ಲಂಡನ್: ಕಳೆದ ವರ್ಷ ಕ್ರಿಕೆಟ್ ಪಂದ್ಯವೊಂದರಲ್ಲಿ ಗಾಯಗೊಂಡಿದ್ದ ಇಂಗ್ಲೆಂಡ್ ಹಾಗೂ ಸಮರ್‍ಸೆಟ್ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮೆನ್ ಕ್ರೇಗ್ ಕೀಸ್‍ವೆಟ್ಟರ್ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿದ್ದಾರೆ.
2014ರ ಜುಲೈನಲ್ಲಿ ಸ್ಥಳೀಯ ಪಂದ್ಯವೊಂದರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಮೂಗಿಗೆ ಹಾಗೂ ಕೆನ್ನೆಯ ಮೂಳೆಗೆ ಬಲವಾದ ಪೆಟ್ಟುಬಿದ್ದು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ಅವರು ಚೇತರಿಸಿಕೊಂಡರಾದರೂ, ದೃಷ್ಟಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ, ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳುವ ಅನಿವಾರ್ಯತೆ ಬಂದೊದಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ನಿವೃತ್ತಿಯ ನಿರ್ಧಾರವನ್ನು ಅವರು ಪ್ರಕಟಿಸಿದರು. `ನನ್ನ ಕಣ್ಣಿನ ದೃಷ್ಟಿದೋಷದಿಂದ ಓರ್ವ ಕ್ರಿಕೆಟಿಗನಾಗಿ ಮತ್ತೆಂದೂ ನಾನು ಮೈದಾನಕ್ಕಿಳಿಯಲಾರೆ ಎಂದೆನಿಸಿದ್ದರಿಂದ ನಿವೃತ್ತಿಯ ನಿರ್ಧಾರ ಘೋಷಿಸುವ ಮನಸ್ಸು ಮಾಡಿದೆ'ಎಂದು ತಿಳಿಸಿದರು. 46 ಏಕದಿನ ಅಂತಾರಾಷ್ಟ್ರೀಯ ಹಾಗೂ 25 ದೇಶೀಯ ಟೆಸ್ಟ್ ಪಂದ್ಯಗಳನ್ನಾಡಿರುವ ಕೀಸ್‍ವೆಟ್ಟರ್, ಇಂಗ್ಲೆಂಡ್ ಪರ ಯಾವುದೇ ಟೆಸ್ಟ್ ಪಂದ್ಯವನ್ನಾಡಿಲ್ಲ. ಕೀಸ್‍ವೆಟ್ಟರ್ ಏಕದಿನದಲ್ಲಿ 46 ಪಂದ್ಯಗಳಿಂದ 1054 ರನ್ ಗಳಿಸಿದರೆ, ಟಿ-20ಯಲ್ಲಿ 25 ಪಂದ್ಯಗಳಿಂದ 526 ರನ್ ದಾಖಲೆ.