ಫಾತುಲ್ಹಾ: ಕ್ರಿಕೆಟ್ ಲೋಕದಲ್ಲಿ ವಿವಾದ ಎಬ್ಬಿಸಿರುವ ಡಿಆರ್‍ಎಸ್ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ತಂಡದ ಆಟಗಾರರ ಬಳಿ ಚರ್ಚೆ ನಡೆಸುವುದಾಗಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿರುವುದಾಗಿ ದ ಸ್ಟೇಟ್ಸ್ ಮನ್ ವರದಿ ಮಾಡಿದೆ.
ಈ ತಂತ್ರಜ್ಞಾನದ ಅಳವಡಿಕೆಗೆ ಬಿಸಿಸಿಐ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸಿತ್ತು. ಆದರೂ, ತಾವು ಈ ಬಗ್ಗೆ ಚರ್ಚಿಸಿ ಸೂಕ್ತ ಸಲಹೆಗಳನ್ನು ಬಿಸಿಸಿಐಗೆ ನೀಡುವುದಾಗಿ ಅವರು ತಿಳಿಸಿದ್ದಾರೆ. ತಂಡದಿಂದ ಉತ್ತಮ ಪ್ರದರ್ಶನ ಹೊರಹೊಮ್ಮಬೇಕಾದಲ್ಲಿ, ಬೌಲರ್ ಗಳ ಹಾಗೂ ಬ್ಯಾಟ್ಸ್‍ಮನ್‍ಗಳು ಯಾವ ರೀತಿ ತಂತ್ರಗಾರಿಕೆ ಅನುಸರಿಸುತ್ತಾರೆ ಹಾಗೂ ಅವು ಹೇಗೆ ಪರಿಣಾಮಕಾರಿಯಾಗಿವೆ ಎಂಬುದರ ಅವಲೋಕನಗೊಳ್ಳಬೇಕು.
ಅದಕ್ಕಾಗಿ ಹೊಸ ತಂತ್ರಜ್ಞಾನಗಳ ಮೊರೆ ಹೋಗಬೇಕು ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಅಲ್ಲದೆ, ಡಿಆರ್‍ಎಸ್ ತಂತ್ರಜ್ಞಾನದ ವಿಚಾರವಾಗಿ ತಂಡದಲ್ಲಿ ಶೀಘ್ರದಲ್ಲಿ ಚರ್ಚೆಯಾಗಲಿದೆ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ. ವಿಶ್ವದ ಭಾರತ ತಂಡ ಮಾತ್ರ ಈವರೆಗೆ ಡಿಆರ್‍ಎಸ್ ತಂತ್ರಜ್ಞಾನಕ್ಕೆ ತಲೆಬಾಗಿಲ್ಲ. ಆದರೆ, ಮುಂದೆ ಹೊಸ ಬೆಳವಣಿಗೆಗಳು ಆಗಲಿವೆ ಎಂಬುದರ ಸ್ಪಷ್ಟ ಸೂಚನೆಯನ್ನು ಕೊಹ್ಲಿ ಹೇಳಿಕೆ ನೀಡಿದೆ.
ತಂಡದಲ್ಲಿ ಐವರು ಬೌಲರ್‍ಗಳಿರುವುದು ಇಷ್ಟ
ಐವರು ಬೌಲರ್‍ಗಳನ್ನು ತಂಡದಲ್ಲಿ ಹೊಂದಿರುವುದನ್ನು ತಾವು ಯಾವತ್ತೂ ಆಶಿಸುವುದಾಗಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಧೋನಿಯವರಿಂದ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ನಂತರ, ಇದೇ ಮೊದಲ ಬಾರಿಗೆ ತಂಡದಲ್ಲಿ ಒಬ್ಬ ಹೆಚ್ಚುವರಿ ಬೌಲರ್‍ನನ್ನು ಸೇರ್ಪಡೆಗೊಳಿಸಿಕೊಳ್ಳುವ ಪ್ರಯೋಗ ಮಾಡಿದ್ದಾರೆ. ಇದು ಮುಂದೆ ಅವರಿಗೆ ಎಷ್ಟರ ಮಟ್ಟಿಗೆ ಫಲ ನೀಡುತ್ತದೋ ಗೊತ್ತಿಲ್ಲ. ಆದರೆ, ಅವರ ಪ್ರಕಾರ ಇದು ಆಪತ್ಕಾಲದಲ್ಲಿ ಸಹಾಯಕ್ಕೆ ಬರುತ್ತದೆ ಎಂಬ ನಂಬಿಕೆಯಿದೆ.
ಇದೇ ಮೊದಲ ಬಾರಿಗೆ ಹೊಸ ಪ್ರಯೋಗ ಮಾಡಲಾಗಿದೆ. ಈ ಪ್ರಯೋಗ ಕೇವಲ ಬಾಂಗ್ಲಾದೇಶ ಪ್ರವಾಸದಲ್ಲಷ್ಟೇ ಅಲ್ಲ, ಮುಂಬರುವ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸಗಳಲ್ಲೂ ಅನುಷ್ಠಾನಗೊಳ್ಳಲಿದೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ. `ತಂಡದಲ್ಲಿ ಐವರು ಬೌಲರ್‍ಗಳಿರಬೇಕೆಂಬ ಸಿದ್ಧಾಂತವನ್ನು ನಾನು ಇಷ್ಟಪಡುತ್ತೇನೆ. ಬೌಲಿಂಗ್ ನಲ್ಲಿ ಪಳಗಿರುವುದರ ಜೊತೆಗೆ ಬ್ಯಾಟಿಂಗ್‍ನಲ್ಲೂ ಮಿಂಚಬಲ್ಲ ಛಾತಿ ಇರುವ ಕ್ರಿಕೆಟಿಗರ ಬಗ್ಗೆ ನಾನು ಹೆಚ್ಚು ಗಮನ ಹರಿಸುತ್ತೇನೆ. ಅಶ್ವಿನ್ ಕ್ರೀಸ್ ನಲ್ಲಿ 40 ರನ್ ಸರಾಸರಿ ಲೆಕ್ಕಾಚಾರದಲ್ಲಿ ಬ್ಯಾಟ್ ಮಾಡಬಲ್ಲರು. ಅದರಂತೆ, ಮತ್ತೊಬ್ಬ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಇದೇ ರೀತಿಯಲ್ಲಿ ಬ್ಯಾಟ್ ಬೀಸಬಲ್ಲರು. ಈ ಮೂವರೂ ಬ್ಯಾಟಿಂಗ್ ನಲ್ಲಿಯೂ ಕ್ಲಿಕ್ ಆಗಿದ್ದೇ ಆದರೆ ತಂಡದಲ್ಲಿ ಎಂಟು ಜನ ಬ್ಯಾಟ್ಸ್‍ಮನ್‍ಗಳು ಸ್ಥಾನಪಡೆದಂತಾಗುತ್ತದೆ' ಎಂದಿದ್ದಾರೆ.