ಬೆಂಗಳೂರು: ತಮಿಳುನಾಡು ತಂಡದ ವಿರುದ್ಧ ಮಾರ್ಚ್ 8ರಿಂದ ಮುಂಬೈನಲ್ಲಿ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕಾಗಿ ಕರ್ನಾಟಕ ತಂಡ ಪ್ರಕಟಿಸಲಾಗಿದ್ದು, ಎರಡು ಬದಲಾವಣೆ ಮಾಡಲಾಗಿದೆ.
ವಿಕೆಟ್ ಕೀಪರ್ ಸಿ.ಎಂ. ಗೌತಮ್ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದು ಅವರ ಬದಲಿಗೆ ಕೆ.ಸಿ. ಅವಿನಾಶ್‍ಗೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಫಾರ್ಮ್ ಕೊರತೆಯಲ್ಲಿ ಬಳಲುತ್ತಿರುವ ಕುನಾಲ್ ಕಪೂರ್ ಸ್ಥಾನಕ್ಕೆ ಅಭಿಷೇಕ್ ರೆಡ್ಡಿ ಸ್ಥಾನ ಪಡೆದಿದ್ದಾರೆ. ಹಿರಿಯ ಅನುಭವಿ ಆಟಗಾರ ಸಿ.ಎಂ. ಗೌತಮ್, ಮುಂಬೈ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದ ವೇಳೆ ಕೀಪಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ನೆಲಕ್ಕೆ ಬಿದ್ದು ಸ್ನಾಯುಎಳೆತೆಕ್ಕೆ ಒಳಗಾಗಿದ್ದರು.
ಫೈನಲ್ ವೇಳೆಗೆ ಅವರು ಚೇತರಿಸಿಕೊಳ್ಳುವುದು ಅಸಾಧ್ಯವಾಗಿರುವ ಹಿನ್ನಲೆಯಲ್ಲಿ ರಾಜ್ಯ ಕ್ರಿಕೆಟ್ ಆಯ್ಕೆದಾರರು ಕೆ.ಸಿ. ಅವಿನಾಶ್‍ಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ. ವಿನಯ್ ಕುಮಾರ್ ನಾಯಕತ್ವದಲ್ಲಿಯೇ ಕಳೆದ ಬಾರಿ ಚಾಂಪಿಯಯನ್ ಪಟ್ಟ ಅಲಂಕರಿಸಿದ್ದ ಕರ್ನಾಟಕ, ಈಗ ಮತ್ತೆ ಅವರ ನಾಯಕತ್ವದಲ್ಲಿಯೇ ತಂಡ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದೊಂದಿಗೆ ಫೈನಲ್ ಅಖಾಡಕ್ಕಿಳಿಯಲಿದೆ.
ಬೆಂಗಳೂರಿನಲ್ಲಿಯೇ ನಡೆದಿದ್ದ ಸೆಮಿಫೈನಲ್ ನಲ್ಲಿ ಕರ್ನಾಟಕದ ಆಟಗಾರರು ಪ್ರಬಲ ಮುಂಬೈ ತಂಡದ ವಿರುದ್ಧ 112 ರನ್‍ಗಳ ಭರ್ಜರಿ ಜಯ ದಾಖಲಿಸಿ ಪ್ರಶಸ್ತಿ ಸುತ್ತು ತಲುಪಿದ್ದಾರೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡ, ಮಹಾರಾಷ್ಟ್ರ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಫೈನಲ್‍ಗೆ ಹೆಜ್ಜೆ ಇಟ್ಟಿದೆ.
ಪ್ರಕಟಗೊಂಡ ಕರ್ನಾಟಕ ತಂಡ ಆರ್. ವಿನಯ್ ಕುಮಾರ್ (ನಾಯಕ), ಮನೀಷ್ ಪಾಂಡೆ (ಉಪನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಆರ್. ಸಮರ್ಥ್, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಉದಿತ್ ಪಟೇಲ್, ಶಿಶಿರ್ ಭಾವನೆ, ಅಬಿsಮನ್ಯು ಮಿಥುನ್, ಶ್ರೀನಾಥ್ ಅರವಿಂದ್, ಎಚ್. ಎಸ್. ಶರತ್, ಜೆ. ಸುಚಿತ್, ಕೆ.ಸಿ. ಅವಿನಾಶ್ (ವಿಕೆಟ್ ಕೀಪರ್), ಅಭಿಷೇಕ್ ರೆಡ್ಡಿ. ಬ್ಯಾಟಿಂಗ್ ಕೋಚ್- ಜೆ. ಅರುಣ್ ಕುಮಾರ್, ಬೌಲಿಂಗ್ ಕೋಚ್- ಮನ್ಸೂರ್ ಅಲಿ ಖಾನ್.