ನವದೆಹಲಿ: ಮಧ್ಯಮ ವೇಗಿ, ಆಸ್ಟ್ರೇಲಿಯಾ ಮೂಲದ ನಾಥನ್ ಕೌಲ್ಟರ್ ನೀಲ್ ಅವರ ಕರಾರುವಾಕ್ ದಾಳಿಯ ನೆರವಿನಿಂದ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ಆಟಗಾರರು 8ನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 9 ವಿಕೆಟ್‍ಗಳಿಂದ ನಿರಾಯಾಸ ಗೆಲವು ದಾಖಲಿಸಿದ್ದಾರೆ.
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಕೇವಲ 118
ರನ್‍ಗಳ ಸಾಧಾರಣ ಮೊತ್ತ ಕಲೆಹಾಕಲಷ್ಟೇ ಶಕ್ತವಾಯಿತು. ಅಲ್ಪ ಗುರಿ ಬೆಂಬತ್ತಿದ ಡೆಲ್ಲಿ ಡೇರ್‍ಡೆವಿಲ್ಸ್ 13.5 ಓವರುಗಳಲ್ಲಿಯೇ ಕೇವಲ 1 ವಿಕೆಟ್ ಕಳೆದುಕೊಂಡು 119 ರನ್‍ಗಳಿಸಿ ಗೆಲವಿನ ಕೇಕೆ ಹಾಕಿತು. ಗುರಿ ಅಲ್ಪವಾಗಿದ್ದರಿಂದ ಡೆಲ್ಲಿಯ ಆರಂಭಿಕ ಬ್ಯಾಟ್ಸ್ ಮನ್‍ಗಳಾದ ಮಾಯಾಂಕ್ ಅಗರ್‍ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಅಂಜದೇ-ಅಳುಕದೇ ಸರಾಗವಾಗಿ ರನ್ ಸಂಪಾದಿಸಿದರು.
ಈ ಜೋಡಿ ಮೊದಲ ವಿಕೆಟ್‍ಗೆ 12.3 ಓವರುಗಳಲ್ಲಿ 106 ರನ್ ಸೇರಿಸಿ ತಂಡಕ್ಕೆ ನಿರಾಯಾಸ ಗೆಲವು ಖಾತ್ರಿಪಡಿಸಿತು. ಪಂಜಾಬ್ ದಾಳಿಯನ್ನು ಆತ್ಮವಿಶ್ವಾಸದಿಂದ ಎದುರಿಸಿದ ಮಾಯಾಂಕ್ ಮತ್ತು ಶ್ರೇಯಸ್ ವೈಯಕ್ತಿಕವಾಗಿ ಅರ್ಧಶತಕವನ್ನೂ ಪೂರೈಸಿ ಗಮನ ಸೆಳೆದರು. ಈ ನಡುವೆ ಶ್ರೇಯಸ್ 40 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ನೆರವಿನಿಂದ 54 ರನ್‍ಗಳಿಸಿದಾಗ ಶಾರ್ದುಲ್ ಠಾಕೂರ್ ಬೌಲಿಂಗ್‍ನಲ್ಲಿ ಪಟೇಲ್‍ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಬಳಿಕ ಮಾಯಾಂಕ್ ಮತ್ತು ಸೌರಭ್ ತಿವಾರಿ ಮುಂದಿನ ಔಪಚಾರಿಕ ಆಟ ಪೂರ್ಣಗೊಳಿಸಿದರು.
ಈ ಗೆಲವಿನೊಂದಿಗೆ ಡೆಲ್ಲಿ ಡೇರ್‍ಡೆವಿಲ್ಸ್ ಪ್ಲೇ-ಆಫ್ ಸುತ್ತು ಪ್ರವೇಶಿಸುವ ಆಸೆ ಹೆಚ್ಚಿಸಿಕೊಂಡಿತು. ಆದರೆ, ತನ್ನ 8ನೇ ಪಂದ್ಯದಲ್ಲಿ 6ನೇ ಸೋಲು ಕಂಡ ಕಿಂಗ್ಸ್ ಪಂಜಾಬ್ ಮಾತ್ರ ಪ್ಲೇ-ಆಫ್ ಸುತ್ತು ಪ್ರವೇಶಿಸುವ ಆಸೆಯನ್ನು ಬಹುತೇಕ ಅಂತ್ಯಗೊಳಿಸಿಕೊಂಡಿತು. ಇದಕ್ಕೂ ಮುನ್ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್‍ನಲ್ಲಿ ಯಾವುದೇ ವಿಶೇಷತೆ ಕಂಡುಬರಲಿಲ್ಲ. ಒಂದು ರೀತಿಯಲ್ಲಿ ಪಂದ್ಯದಾರಂಭಕ್ಕೆ ಮುನ್ನವೇ ಸೋಲು ಒಪ್ಪಿಕೊಂಡಂತಾಗಿತ್ತು. ಏಕೆಂದರೆ, ಮೊತ್ತ ಕೇವಲ 10 ರನ್ ಆಗುವಷ್ಟರಲ್ಲಿಯೇ ಅಗ್ರಕ್ರಮಾಂಕದ ನಾಲ್ವರು ಬ್ಯಾಟ್ಸ್ ಮನ್‍ಗಳನ್ನು ಕಳೆದುಕೊಂಡಿತ್ತು. ಐದನೇ ಕ್ರಮಾಂಕದಲ್ಲಿ ಆಡಲಿಳಿದ ಡೇವಿಡ್ ಮಿಲ್ಲರ್ 41 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 42 ರನ್‍ಗಳಿಸಿದ್ದೇ ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತವಾಯಿತು.
ಮುಖ್ಯವಾಗಿ ಡೆಲ್ಲಿ ಡೇರ್‍ಡೆವಿಲ್ಸ್ ಪರ ಮಾರಕ ದಾಳಿ ಸಂಘಟಿಸಿದ ನಾಥನ್ ಕೌಲ್ಟರ್ ನೀಲ್ ಅವರು ಪಂಜಾಬ್‍ನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನುಲುಬು ಮುರಿದರೆ, ಎಡಗೈ ವೇಗಿ ಜಹೀರ್ ಖಾನ್, ಆರಂಭಿಕ ಆಟಗಾರರನ್ನು ಬೇಗನೆ ಪೆವಿಲಿಯನ್‍ಗೆ ಕಳುಹಿಸಿ ಶುರುವಿನಲ್ಲಿಯೇ ಎದುರಾಳಿಗೆ ದೊಡ್ಡ ಆಘಾತ ಕೊಟ್ಟರು. ಗಾಯದಿಂದ ಹೊರಗುಳಿದಿದ್ದ ಜಹೀರ್, ಈ ಬಾರಿಯ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದರು. ತಮ್ಮ ಮೊದಲ ಪ್ರವೇಶದಲ್ಲಿಯೇ ಅವರು ಬೌಲಿಂಗ್‍ನಲ್ಲಿ ಮಿಂಚುವುದರೊಂದಿಗೆ ಅತ್ಯುತ್ತಮ ರೀತಿಯಲ್ಲಿಯೇ ರಂಗಪ್ರವೇಶ ಮಾಡಿದಂತಾಯಿತು. ಇತರೆ ಬೌಲರ್‍ಗಳೂ ಸಹ ಶಿಸ್ತುಬದ್ದ ಪ್ರದರ್ಶನ ನೀಡಿದ್ದರಿಂದ ಕಿಂಗ್ಸ್ ಪಂಜಾಬ್ ಆಟಗಾರರಿಗೆ ಎಚ್ಚೆತ್ತುಕೊಳ್ಳಲು ಅವಕಾಶವೇ ಇಲ್ಲದಾಯಿತು.