ಭುವನೇಶ್ವರ: ಮುನ್ನಡೆ ಆಟಗಾರ ಎಸ್.ವಿ. ಸುನಿಲ್ ಹಾಗೂ ಯುವರಾಜ್ ವಾಲ್ಮೀಕಿ ಗಳಿಸಿದ ಗೋಲುಗಳ ಸಹಾಯದಿಂದ ಸರ್ದಾರ್ ಸಿಂಗ್ ನೇತೃತ್ವದ ಭಾರತ ತಂಡ ಜಪಾನ್ ವಿರುದ್ಧ ಮಂಗಳವಾರ ನಡೆದ ದ್ವಿತೀಯ ಟೆಸ್ಟ್ ಹಾಕಿ ಪಂದ್ಯದಲ್ಲಿ 2-0 ಗೋಲುಗಳ ಅಂತರದಿಂದ ಜಯ ಗಳಿಸಿತು.
ಇದರಿಂದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಭಾನುವಾರ ನಡೆದಿದ್ದ ಮೊದಲ ಟೆಸ್ಟ್ ಪಂದ್ಯ 1-1ರ ಡ್ರಾನಲ್ಲಿ ಸಮಾಪ್ತಿಯಾಗಿತ್ತು. ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ವಿಶ್ವ ರ್ಯಾಕಿಂಗ್‍ನಲ್ಲಿ 16ನೇ ಶ್ರೇಯಾಂಕ ಪಡೆದಿರುವ ಜಪಾನ್ ತಂಡ ಮೊದಲ ಪಂದ್ಯದಲ್ಲೇ ಸಮಬಲದ ಹೋರಾಟ ತೋರಿತ್ತು. ಅದೇ ಮಾದರಿಯ ಹೋರಾಟವನ್ನು ದ್ವಿತೀಯ ಪಂದ್ಯದಲ್ಲೂ ನಿರೀಕ್ಷಿಸಲಾಗಿತ್ತು. ಈ ನಿರೀಕ್ಷೆಯನ್ನು ಜಪಾನ್ ಹುಸಿಗೊಳಿಸಲಿಲ್ಲ. ಮಂಳವಾರ ನಡೆದ ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿತು.
ಈ ಆಕ್ರಮಣದ ಮುಂದೆ ಭಾರತ ತಂಡ ಆಟಗಾರರು ಮೊದಲ ನಿಮಿಷಗಳಲ್ಲಿ ಗೋಲು ಗಳಿಸಲು ಪರದಾಡಬೇಕಾಯಿತು. 23ನೇ ನಿಮಿಷದಲ್ಲಿ ಭಾರತಕ್ಕೆ ಒಂದು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಅದನ್ನು ಗೋಲಾಗಿ ಪರಿಣಮಿಸುವಲ್ಲಿ ಗುರ್ಬಾಜ್ ಸಿಂಗ್ ವಿಫಲರಾದರು. ಇದರಿಂದ ಭಾರತ ತಂಡದ ಆಟಗಾರರು ಹತಾಶರಾಗಲಿಲ್ಲ. ಜಪಾನ್ ತೋರುತ್ತಿದ್ದ ಆಟಕ್ಕೆ ಪ್ರತಿಯಾಗಿ ತಾವು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಇದರ ಫಲವಾಗಿ, 26ನೇ ನಿಮಿಷದಲ್ಲಿ ಜಪಾನ್ ಗೆ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ವಿಫಲಗೊಳಿಸುವಲ್ಲಿ ಸರ್ದಾರ್ ಪಡೆ ಯಶಸ್ಸು
ಕಂಡಿತು. ಇದೇ ಮಾದರಿಯಲ ಸಮ ಬಲದ ಹೋರಾಟ ಮುಂದುವರೆದಿದ್ದಾಗಲೇ, ಭಾರತ ತಂಡಕ್ಕೆ 29ನೇ ನಿಮಿಷದಲ್ಲಿ ಮೊದಲ ಯಶಸ್ಸು ಸಿಕ್ಕಿತು. ಯುವರಾಜ್ ವಾಲ್ಮೀಕಿ ಅವರು ಗೋಲು ಗಳಿಸುವ ಮೂಲಕ ಭಾರತದ ಗೋಲ್‍ನ ಖಾತೆ ತೆರೆದರು. ಆ ಮೂಲಕ, ಪಂದ್ಯದ ಮೊದಲಾರ್ಧ ಮುಗಿದಾಗ ಭಾರತ ತಂಡ, ಜಪಾನ್ ತಂಡಕ್ಕಿಂತ 1-0 ಗೋಲುಗಳ ಅಂತರದಲ್ಲಿ ಮುನ್ನಡೆ ಪಡೆಯಿತು. ಇನ್ನು ದ್ವಿತೀಯಾರ್ಧದಲ್ಲಿ ಜಪಾನ್ ತಂಡ, ಭಾರತದ ವಿರುದ್ಧ ಪುನಃ ಮುಗಿಬಿತ್ತು. ಆದರೆ, ಪ್ರತಿ ಹಂತದಲ್ಲೂ ಭಾರತೀಯರು ಅವರ ಕಾರ್ಯತಂತ್ರಗಳನ್ನು ವಿಫಲಗೊಳಿಸುತ್ತಿತ್ತು. 48ನೇ
ನಿಮಿಷದಲ್ಲಿ ಭಾರತ ತಂಡ, ಮತ್ತೊಂದು ಗೋಲು ದಾಖಲಿಸುವ ಮೂಲಕ ಪ್ರವಾಸಿಗರ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಮುನ್ನಡೆ ಸಾಧಿಸಿತು. ಈ ಗೋಲು ಗಳಿಸಿಕೊಟ್ಟಿದ್ದು ಕನ್ನಡಿಗ ಎಸ್.ವಿ. ಸುನಿಲ್. ಪಂದ್ಯ ಮುಕ್ತಾಯವಾಗುವವರೆಗೂ ಭಾರತ ತಂಡ, ಎಚ್ಚರಿಕೆಯ ಆಟವಾಡಿ, ಇದೇ ಮುನ್ನಡೆಯನ್ನು ಕಾಯ್ದುಕೊಂಡಿದ್ದರಿಂದ ಕೊನೆಗೆ 2-0 ಗೋಲುಗಳ ಅಂತರದಲ್ಲೇ ಸರ್ದಾರ್ ಪಡೆ ಗೆಲವಿನ ನಗೆ ಬೀರಿತು.