ಕ್ರೀಡೆ

ಟ್ರೈನರ್ ಕಿರುಕುಳದಿಂದ ಬೇಸತ್ತು ನಾಲ್ಕು ಅಥ್ಲೀಟ್ ಗಳ ಆತ್ಮಹತ್ಯೆ ಯತ್ನ: ಓರ್ವ ಅಥ್ಲೀಟ್ ಸಾವು

Shilpa D

ತಿರುವನಂತಪುರ: ಟ್ರೈನರ್ ಕಿರುಕುಳದಿಂದ ಬೇಸತ್ತ ನಾಲ್ವರು ಅಥ್ಲೀಟ್ ಗಳು ಆತ್ಮಹತ್ಯೆಗೆ ಯತ್ನಿಸಿ, ಅದರಲ್ಲಿ ಒಬ್ಬ  ಮಹಿಳಾ ಅಥ್ಲೀಟ್ ಮೃತಪಟ್ಟಿರುವ ಘಟನೆ ಕೇರಳದ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್ ನಲ್ಲಿ ನಡೆದಿದೆ.

ಈ ನಾಲ್ವರು ಅಥ್ಲೀಟ್ ಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಅದರಲ್ಲಿ ಒಬ್ಬ ಅಥ್ಲೀಟ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ.

ನಾಲ್ವರು ಅಥ್ಲೀಟ್ ಗಳು ವಿಷಪೂರಿತವಾದ ಒಥಲಂಗ ಎಂಬ ಹಣ್ಣನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಸಮೀಪದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯ್ತು. ಇದರಲ್ಲಿ ಒಬ್ಬಾಕೆ ಪ್ರಸಕ್ತ ವರ್ಷ ನಡೆದ ನ್ಯಾಷನಲ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ.

ಪುನ್ನಧಾಮ ಬಳಿಯಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿರುವ ವಾಟರ್ ಸ್ಪೊರ್ಟ್ಸ್ ಸೆಂಟರ್ ನಲ್ಲಿ ಜಲಕ್ರೀಡೆ ತರಬೇತಿ ಪಡೆಯುತ್ತಿದ್ದರು.

ತರಬೇತಿ ಸೆಂಟರ್ ನಲ್ಲಿ ಟ್ರೈನರ್ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಹೀಗಾಗಿ ನೊಂದ ನಾಲ್ಕು ಅಥ್ಲೀಟ್ ಗಳು ವಿಷಪೂರಿತ ಹಣ್ಣು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೆಲ ಸೀನಿಯರ್ ಅಥ್ಲೀಟ್ ಗಳು ಕೂಡ ಇವರಿಗೆ ಕಿರುಕುಳ ನೀಡುತ್ತಿದ್ದರು ಎಂದು ಮೃತ ಮಹಿಳಾ ಅಥ್ಲೀಟ್ ಸಂಬಂಧಿಗಳು ಆರೋಪಿಸಿದ್ದಾರೆ.

 ಹಾಸ್ಟೆಲ್ ನಲ್ಲಿ ಅವರಿಗೆ ಯಾರು ಕಿರುಕುಳ ನೀಡುತ್ತಿರಲಿಲ್ಲ ಎಂದು ಹಾಸ್ಟೆಲ್ ವಾರ್ಡನ್ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಪ್ರಕರಣವನ್ನು ಕೂಡಲೇ ತನಿಖೆಗೆ ವಹಿಸಬೇಕೆಂದು ಅಥ್ಲೀಟ್ ಗಳ ಪೋಷಕರು ಒತ್ತಾಯಿಸಿದ್ದಾರೆ.

SCROLL FOR NEXT