ಈತನ ಹೆಸರು ಹಾರ್ದಿಕ್ ಪಾಂಡ್ಯ. ನಿನ್ನೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈಗೆ ಗೆಲುವು ತಂದುಕೊಡುವ ಮೂಲಕ ಹೀರೋ ಆದವನು. ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ 21ರ ಹರೆಯದ ಹಾರ್ದಿವ್ ಬರೀ ಎಂಟು ಎಸೆತಗಳನ್ನೆದುರಿಸಿ 21 ರನ್ ಬಾರಿಸಿದ್ದನು. ಈತನ ಈ ಹೊಡೆಬಡಿ ಆಟದಿಂದ ಮುಂಬೈ ವಿಜಯ ಪತಾಕೆ ಹಾರಿಸುವಂತಾಯಿತು.
ಇಷ್ಟೇ ಮಾತ್ರವಲ್ಲ, ಉತ್ತಮ ಕ್ಷೇತ್ರ ರಕ್ಷಕನಾದ ಈತ ಮೂರು ಕ್ಯಾಚ್ ಹಿಡಿದಿದ್ದ . ಒಂದು ಓವರ್ ಎಸೆದ ಈತ ಆ ಓವರ್‌ನಲ್ಲಿ 4 ರನ್ ಬಿಟ್ಟುಕೊಟ್ಟಿದ್ದನು.
ಹದಿನೆಂಟನೇ ಓವರ್‌ನ ಮೊದಲ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಔಟಾದಾಗ ಮುಂಬೈಗೆ ಗುರಿ ಮುಟ್ಟಲು 34 ರನ್‌ಗಳ ಅಗತ್ಯವಿತ್ತು, ಉಳಿದಿದ್ದು 17 ಎಸೆತಗಳು! ಬ್ರಾವೋ ಎಸೆದ ಈ ಓವರ್‌ನಲ್ಲಿ ಮುಂಬೈಗೆ ಸಿಕ್ಕಿದ್ದು ಕೇವಲ ನಾಲ್ಕು ರನ್. ಪವನ್ ನೇಗಿ 19ನೇ ಓವರ್ ಎಸೆದಾಗ ಮುಂಬೈಗೆ 12 ಬಾಲ್‌ಗಳಲ್ಲಿ 30 ರನ್‌ಗಳ ಅಗತ್ಯವಿತ್ತು. 2 ಬಾಲ್‌ಗಳನ್ನೆದುರಿಸಿ 2 ರನ್ ಗಳಿಸಿದ ಹಾರ್ದಿಕ್‌ಗಿಂತ 17 ಎಸೆತಗಳಲ್ಲಿ 24 ರನ್‌ಗಳಿಸಿದ ಅನುಭವೀ ಕ್ರಿಕೆಟಿಗ ರಾಯ್ಡುವಿನ ಪಾತ್ರ ಇಲ್ಲಿ ನಿರ್ಣಾಯಕವಾಗಿರುತ್ತದೆ ಎಂಬುದೇ ಎಲ್ಲರ ಊಹೆಯಾಗಿತ್ತು.
ಆದರೆ ನೇಗಿ ಎಸೆದ ಮೊದ ಬಾಲ್‌ನ್ನು ಗ್ಯಾಲರಿಗಟ್ಟಿ ಹಾರ್ದಿಕ್ ಎಲ್ಲರನ್ನೂ ಅಚ್ಚರಿಗೊಳಿಸಿದರು. ನಂತರದ ಬಾಲ್‌ಗಳನ್ನು ಬೌಂಡರಿಗಳತ್ತ ಅಟ್ಟುತ್ತಾ ನಿರ್ಣಾಯಕ ಹಂತದಲ್ಲಿ ಆಸರೆಯಾಗಿ ನಿಂತರು. ಹೀಗೆ ಹಾರ್ದಿಕ್ ಗೆಲುವಿನ ರುವಾರಿಯಾದರು.
ಬರೋಡಾ ಮೂಲದ ಈತ ಬಲಗೈ ಬ್ಯಾಟ್ಸ್‌ಮೆನ್ ಮತ್ತು ಮೀಡಿಯಂ ಪೇಸರ್ ಆಗಿದ್ದಾನೆ. ಈ ಐಪಿಎಲ್ ಆವೃತ್ತಿಯಲ್ಲಿ 4 ಪಂದ್ಯಗಳನ್ನಾಡಿರುವ ಹಾರ್ದಿಕ್, ನಿನ್ನೆ ನೀಡಿದ್ದು ಅತ್ಯುತ್ತಮ ಪ್ರದರ್ಶನವಾಗಿತ್ತು. ಐಪಿಎಲ್‌ನಲ್ಲಿ 42 ರನ್ ಗಳಿಸಿರುವ ಈತ ಸಿಕ್ಸರ್ ಬಾರಿಸಿಯೇ 30 ರನ್ ಗಳಿಸಿದ್ದರು ಎಂಬುದು ವಿಶೇಷ.