ಪ್ಯಾರಿಸ್: ಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ರೊಮೇನಿಯಾದ ಫ್ಲೊರಿನ್ ಮರ್ಜಿಯಾ ಜೋಡಿ, ಫ್ರೆಂಚ್ ಓಪನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದ 3ನೇ ಸುತ್ತು ಪ್ರವೇಶಿಸಿದ್ದಾರೆ.
ಶನಿವಾರ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಬೋಪಣ್ಣ-ಮರ್ಜಿಯಾ, ಅಮೆರಿಕದ ಜೋಡಿಯಾದ ಆಸ್ಟಿನ್ ಕ್ರಾಜಿಸೆಕ್ ಹಾಗೂ ಡೊನಾಲ್ಡ್ ಯಂಗ್ ಅವರನ್ನು 3-6,6-3,7-5 ಸೆಟ್ ಗಳ ಅಂತರದಲ್ಲಿ ಮಣಿಸಿದರು.
ಪ್ರಿ ಕ್ವಾರ್ಟರ್ ಗೆ ಜೊಕೊವಿಚ್, ಮರ್ರೆ:
ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜೊಕೊವಿಚ್ ಹಾಗೂ ಮೂರನೇ ಶ್ರೇಯಾಂಕಿತ ಆಟಗಾರ ಆ್ಯಡಿ ಮರ್ರೆ ಫ್ರೆಂಚ್ ಓಪನ್ ಪ್ರೀ ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಿದ್ದಾರೆ.
ನಡಾಲ್ ಗೆ ಜಯ:
ವಿಶ್ವದ 7ನೇ ಶ್ರೇಯಾಂಕಿತ ಆಟಗಾರ, ಸ್ಪೇನ್ ನ ರಾಫೆಲ್ ನಡಾಲ್ ಅವರು ಫ್ರೆಂಚ್ ಓಪನ್ ಪಂದ್ಯಾವಳಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಅವರು, ರಷ್ಯಾದ ಆಂಡ್ರೆ ಕುಜ್ನೆತ್ಸೊವ್ ವಿರುದ್ಧ 6-1,6-3,6-2 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿದರು. ಮೊದಲ ಸೆಟ್ ನಲ್ಲಿ ಸುಲಭ ಜಯ ಸಾಧಿಸಿದ ನಡಾಲ್ ಗೆ, 2ನೇ ಹಾಗೂ 3ನೇ ಸೆಟ್ ನಲ್ಲಿ ಕುಜ್ನೆತ್ಸೊವ್ ಕೊಂಚ ಪ್ರತಿಸ್ಪರ್ಧೆ ಒಡ್ಡಿದರು. ಅದರೆ, ತಮ್ಮ ಮೊನಚು ಆಟದಿಂದಾಗಿ ತೀವ್ರ ಪ್ರತಿರೋಧ ನೀಡಿದ ನಡಾಲ್, ಅಂತಿಮವಾಗಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು.