ಕ್ರೀಡೆ

ಐಸಿಸಿ ಚೇರ್ಮನ್ ಹುದ್ದೆಯಿಂದ ಶ್ರೀನಿವಾಸನ್ ವಜಾ

Srinivasamurthy VN

ಮುಂಬೈ: ಬಿಸಿಸಿಐನ 85ನೇ ವಾರ್ಷಿಕ ಮಹಾ ಸಭೆಯಲ್ಲಿ ಆಡಳಿತ ಮಂಡಳಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಐಸಿಸಿ ಅಧ್ಯಕ್ಷ ಹುದ್ದೆಯಿಂದ ಶ್ರೀನಿವಾಸನ್ ಅವರನ್ನು  ಪದಚ್ಯುತಿಗೊಳಿಸಲಾಗಿದೆ.

ಮುಂಬೈನಲ್ಲಿ ನಡೆದ ಬಿಸಿಸಿಐನ 85ನೇ ವಾರ್ಷಿಕ ಮಹಾ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದ್ದು, ಹಿತಾಸಕ್ತಿಯ ಸಂಘರ್ಷ(Conflict of interest)ದ ಆಧಾರದ  ಮೇಲೆ ಶ್ರೀನಿ ಅವರನ್ನು ವಜಾಗೊಳಿಸಲಾಗಿದೆ. ಈ ಹಿಂದೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಸಾಕಷ್ಟು ವಿವಾದಗಳಿಗೆ ಗುರಿಯಾಗಿದ್ದ ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ  ಸ್ಥಾನದಿಂದ ದೂರವುಳಿಯಲು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ತಮ್ಮದೆ ಪ್ರತ್ಯೇಕ ಬಣವನ್ನು ರಚನೆ ಮಾಡಿಕೊಂಡು ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದ್ದರು. ಬಳಿಕ  ತಮ್ಮ ಪ್ರಭಾವ ಬಳಕೆ ಮಾಡಿಕೊಂಡು ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ಎಲ್ಲ ಬೆಳವಣಿಗೆಯಿಂದ ಬಿಸಿಸಿಐ ಸಾಕಷ್ಟು ಮುಜುಗರಕ್ಕೊಳಗಾಗಿತ್ತು. ಇಂಡಿಯಾ ಸಿಮೆಂಟ್ಸ್ ನಿರ್ದೇಶಕರಾಗಿ, ತಮಿಳು ನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ, ಐಪಿಎಲ್ ನಲ್ಲಿ  ಸೂಪರ್ ಕಿಂಗ್ಸ್ ತಂಡದ ಫ್ರಾಂಚೈಸಿಯಾಗಿ ಶ್ರೀನಿವಾಸನ್ ಕಾರ್ಯ ನಿರ್ವಹಿಸುತ್ತಿದ್ದರು. ಇದು ಬಿಸಿಸಿಐ ಕಾನೂನು ಉಲ್ಲಂಘನೆಯಾಗಿದ್ದು, ಓರ್ವ ವ್ಯಕ್ತಿ ಒಂದಕ್ಕಿಂತ ಹೆಚ್ಚು ಹುದ್ದೆಗಳಲ್ಲಿ  ಕಾರ್ಯ ನಿರ್ವಹಿಸುವಂತಿಲ್ಲ. ಹೀಗಿದ್ದೂ ಶ್ರೀನಿವಾಸನ್ ಕಾನೂನು ಮೀರಿ ಹೆಚ್ಚು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದು ಬಿಸಿಸಿಐನ ಕೆಂಗಣ್ಣಿಗೆ ಗುರಿಯಾಗಿತ್ತು.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಿಂದಾಗಿ ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷಗಾದಿಯಿಂದ ದೂರ ಉಳಿಯುವಂತಾಗಿತ್ತು. ಬಳಿಕ  ಜಗಮೋಹನ್ ದಾಲ್ಮಿಯಾ ಬಿಸಿಸಿಐನ ಅಧ್ಯಕ್ಷರಾದರು. ಆದರೆ ಕೆಲವೇ ತಿಂಗಳಲ್ಲಿ ದಾಲ್ಮಿಯಾ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಬಳಿಕ ಶಶಾಂಕ್ ಮನೋಹರ್ ಅವರು  ಬಿಸಿಸಿಐ ಅಧ್ಯಕ್ಷಗಾದಿ ಏರಿದ್ದರು.

ಇದೀಗ ಕ್ರಿಕೆಟ್ ಅನ್ನು ಸ್ವಚ್ಛಗೊಳಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಶಶಾಂಕ್ ಮನೋಹರ್ ನೇತೃತ್ವದ ಬಿಸಿಸಿಐ ಆಡಳಿತ ಮಂಡಳಿ, ಇದರ ಮೊದಲ ಭಾಗ ಎನ್ನುವಂತೆ ಶ್ರೀನಿವಾಸನ್  ಅವರನ್ನು ಐಸಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ. ಅಲ್ಲದೆ ಬಿಸಿಸಿಐನಲ್ಲಿ ಶ್ರೀನಿವಾಸನ್ ಅವರಿಗಿದ್ದ ಎಲ್ಲ ಅಧಿಕಾರಗಳನ್ನು ಕಿತ್ತುಕೊಳ್ಳಲಾಗಿದೆ.

ಐಸಿಸಿಗೆ ಶಶಾಂಕ್ ನೂತನ ಬಾಸ್..!
ಇನ್ನು ಶ್ರೀನಿವಾಸನ್ ಪದಚ್ಯುತಿ ಬಳಿಕ ತೆರವಾಗಿರುವ ಐಸಿಸಿ ಅಧ್ಯಕ್ಷ ಸ್ಥಾನವನ್ನು ಶಶಾಂಕ್ ಮನೋಹರ್ ಅಲಂಕರಿಸಲಿದ್ದು, ಅವರು ಜೂನ್ 2016ರವರೆಗೂ ಐಸಿಸಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ರವಿಶಾಸ್ತ್ರಿ, ರೋಜರ್ ಬಿನ್ನಿಗೂ ಗೇಟ್ ಪಾಸ್
ಇನ್ನು ಬಿಸಿಸಿಐನ ಆಡಳಿತ ಮಂಡಳಿಯಲ್ಲಿಯೂ ಮೇಜರ್ ಸರ್ಜರಿ ಮಾಡಿರುವ ಬಿಸಿಸಿಐ, ಟೀಂ ಇಂಡಿಯಾದ ನಿರ್ದೇಶಕರಾಗಿರುವ ರವಿಶಾಸ್ತ್ರಿ ಅವರನ್ನು ಐಪಿಎಲ್ ಗವರ್ನಿಂಗ್  ಕಮಿಟಿಯಿಂದ ತೆಗೆದು ಹಾಕಿದೆ. ಅಲ್ಲದೆ ಹಿತಾಸಕ್ತಿಯ ಸಂಘರ್ಷದ ಆಧಾರದ ಮೇಲೆ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ ಅವರನ್ನು ಪದಚ್ಯುತಗೊಳಿಸಲಾಗಿದೆ. ರೋಜರ್  ಬಿನ್ನಿ ಅವರ ಪುತ್ರ ಸ್ಟುವರ್ಟ್ ಬಿನ್ನಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿಕೊಂಡ ಹಿನ್ನಲೆಯಲ್ಲಿ ರೋಜರ್ ಬಿನ್ನಿ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನಲೆಯಲ್ಲಿ  ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

SCROLL FOR NEXT