ಕರಾಚಿ: ಡಿಸೆಂಬರ್‌ನಲ್ಲಿ ಭಾರತದಲ್ಲಿ ನಡೆಯುವ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸುವಂತೆ ಪಾಕಿಸ್ತಾನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧಿಕೃತ ಆಹ್ವಾನ ನೀಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ(ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್ ಅವರು ಹೇಳಿದ್ದಾರೆ.
ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರು ದೂರವಾಣಿ ಮೂಲಕ ಆಹ್ವಾನ ನೀಡಿದ್ದಾರೆ ಎಂದು ಶಹರ್ಯಾರ್ ಅವರು ಲಾಹೋರ್‌ನಲ್ಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
'ಶಶಾಂಕ್ ಮನೋಹರ್ ಅವರು ನಿನ್ನೆ ನನಗೆ ದೂರವಾಣಿ ಕರೆ ಮಾಡಿ, ಉಭಯ ರಾಷ್ಟ್ರಗಳ ನಡುವಿನ ಕ್ರಿಕೆಟ್ ಸರಣಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ ಸರಣಿ ಭಾರತದಲ್ಲಿ ನಡೆಯಬೇಕು ಎಂದು ಹೇಳಿರುವುದಾಗಿ' ತಿಳಿಸಿದ್ದಾರೆ ಎಂದರು.
ಮೊಹಾಲಿ ಮತ್ತು ಕೊಲ್ಕತಾದಲ್ಲಿ ಸರಣಿ ಆಯೋಜಿಸುವ ಉದ್ದೇಶವಿದ್ದು, ನಮ್ಮ ತಂಡಕ್ಕೆ ಬಿಸಿಸಿ ಸೂಕ್ತ ಭದ್ರತೆ ಒದಗಿಸಲಿದೆ ಎಂದು ಮನೋಹರ್ ಭರವಸೆ ನೀಡಿರುವುದಾಗಿ ಶಹರ್ಯಾರ್ ಹೇಳಿದ್ದಾರೆ.