ರಾಯ್ಪುರ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ವಿಶ್ವ ಚಾಂಪಿಯನ್ನರನ್ನು ಮಣಿಸುವ ಉತ್ಸಾಹದಲ್ಲಿ ಕಣಕ್ಕಿಳಿದಿದ್ದ ಸರ್ದಾರ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡಕ್ಕೆ ಮುಖಭಂಗವಾಗಿದೆ. ಭಾನುವಾರ ನಡೆದ ಮುಖಾಮುಖಿಯಲ್ಲಿ ಭಾರತ ತಂಡವನ್ನು 1-2 ಗೋಲುಗಳ ಅಂತರದಿಂದ ಮಣಿಸಿದ ಆಸ್ಟ್ರೇಲಿಯಾ ತಂಡ, ಮೂರು ಪಂದ್ಯಗಳ ಸರಣಿಯಲ್ಲಿ 1-೦ ಅಂತರದ ಮುನ್ನಡೆ ಸಂಪಾದಿಸಿತು.
ಹೊಚ್ಚ ಹೊಸ ಸರ್ದಾರ್ ವಲ್ಲಭಭಾಯಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭದಿಂದಲೂ ಇತ್ತಂಡಗಳು ಉತ್ತಮವಾಗಿಯೇ ಪೈಪೋಟಿ ನೀಡಿದವು. ಆದರೆ, ಭಾರತ ತಂಡದ ದೌರ್ಬಲ್ಯಗಳನ್ನು ಮೊದಲ ಪಂದ್ಯದಲ್ಲಿ ಚೆನ್ನಾಗಿ ಅರಿತಿದ್ದ ಆಸ್ಟ್ರೇಲಿಯಾ ಅದನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಆದರೂ, ಪಂದ್ಯದಲ್ಲಿ ಮೊದಲು ಗೋಲು ದಾಖಲಿಸಿದ್ದು ಭಾರತವೇ.
ಪಂದ್ಯದ ಎರಡನೇ ಕ್ವಾರ್ಟರ್ ಅವಧಿಯಲ್ಲಿ ಮಿಂಚಿನ ನಡೆ ತೋರಿದ ದೇವಿಂದರ್ ವಾಲ್ಮೀಕಿ ಅವರು, ಪಂದ್ಯದ 23ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ರಕ್ಷಣಾ ಕೋಟೆಯನ್ನು ಬೇಧಿಸಿ ಸಾಗಿ, ಗೋಲ್ ಕೀಪರ್ ಲಿಯೋನ್ ಹೇವರ್ಡ್ ಕಣ್ತಪ್ಪಿಸಿ, ಚೆಂಡನ್ನು ಆಸೀಸ್ ಗೋಲು ಪೆಟ್ಟಿಗೆಯೊಳಗೆ ನುಗ್ಗಿಸುವಲ್ಲಿ ಯಶಸ್ವಿಯಾದರು.
ಈ ಮೂಲಕ, ಭಾರತ ತಂಡ, ಆಸೀಸ್ ವಿರುದ್ಧ 1-0 ಗೋಲ್‍ನ ಮುನ್ನಡೆ ಪಡೆಯಿತು. ಆದರೆ, ಇದಾದ ನಂತರ, ಭಾರತಕ್ಕೆ ಸಿಕ್ಕ ಕೆಲವು ಗೋಲುಗಳಿಸುವ ಅವಕಾಶಗಳನ್ನು ಎದುರಾಳಿಗಳು
ವಿಫಲಗೊಳಿಸಿದರು. ಆದರೆ, ನಾಲ್ಕನೇ ಕ್ವಾರ್ಟರ್ ಅವಧಿಯಲ್ಲಿ ಭಾರತದ ಉತ್ಸಾಹಕ್ಕೆ ಭಂಗ ತಂದ ಆಸೀಸ್, ಎರಡು ಗೋಲು ದಾಖಲಿಸಿ, ಪಂದ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. 47ನೇ ಜಾಕೋಬ್ ವೆಟ್ಟನ್ ಅವರು ತಮ್ಮ ತಂಡಕ್ಕೆ ಮೊದಲ ಗೋಲ್ ಗಳಿಸಿಕೊಟ್ಟರೆ, 48ನೇ ನಿಮಿಷದಲ್ಲಿ ಎರಾನ್ ಜಾಲೆವ್‍ಸ್ಕಿ ಅವರು 2ನೇ ಗೋಲು ಗಳಿಸಿದರು.
ಪಂದ್ಯದ ಅಂತ್ಯದವರೆಗೂ ಭಾರತದ ಕಡೆಯಿಂದ ಮತ್ತೊಂದು ಸಾಂಘಿಕ ದಾಳಿ ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ, ಆಸ್ಟ್ರೇಲಿಯಾ ತಂಡ 2-1 ಅಂತರದಲ್ಲಿ ಜಯ ಸಾಧಿಸಿತು.