ಕ್ರೀಡೆ

ಭಾರತ-ಪಾಕ್ ಸರಣಿ: ಶ್ರೀಲಂಕಾದಲ್ಲಿ ಸೀಮಿತ ಓವರ್, ಟೆಸ್ಟ್ ಗೆ ಇಂಗ್ಲೆಂಡ್ ಆತಿಥ್ಯ?

Srinivas Rao BV

ಕರಾಚಿ: ಮುಂದಿನ ತಿಂಗಳು ನಡೆಯಬೇಕಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಕ್ರಿಕೆಟ್ ಸರಣಿ ದಿನಕ್ಕೊಂದು ತಿರುವು ಪಡೆದು ಹೊಸ ಹೊಸ ಬೆಳವಣಿಗೆಗಳು ಕಂಡುಬರುತ್ತಿವೆ. ಎರಡು ದಿನಗಳ ಹಿಂದಷ್ಟೇ ಭಾರತ- ಪಾಕ್ ನಡುವಣ ಸರಣಿಗೆ ಶ್ರೀಲಂಕಾ ಆತಿಥ್ಯ  ವಹಿಸಲಿದೆ ಎಂಬ ಸುದ್ದಿ ಬಂದ ಬೆನ್ನಲ್ಲೇ, ಈಗ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಆತಿಥ್ಯ ವಹಿಸಲಿದೆ ಎಂಬ ಮಾಹಿತಿಗಳು ಬಂದಿವೆ.
ದುಬೈ ನಲ್ಲಿ ನಡೆದ ಸಭೆಯ ವೇಳೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್ ಈ ಕುರಿತು ಮಾತುಕತೆ ನಡೆಸಿದ್ದು, ಅಧಿಕೃತ ಹೇಳಿಕೆ ಬಾಕಿ ಉಳಿದಿದೆ ಎಂಬ ವರದಿ ಬಂದಿದೆ. ಪ್ರಸ್ತುತ ಯೋಜನೆ ಪ್ರಕಾರ ಪಾಕಿಸ್ತಾನ 2017 ರಲ್ಲಿ ಪೂರ್ಣ ಪ್ರಮಾಣದ ಭಾರತ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮೊದಲು ಭಾರತ ಎರಡು ಹಂತದಲ್ಲಿ ಪಾಕಿಸ್ತಾನ ವಿರುದ್ಧ ಹೊರ ಅಂಗಣದಲ್ಲಿ ಸರಣಿಯನ್ನಾಡಲಿದೆ ಆ ಮೂಲಕ ಮೊದಲ ಹಂತದಲ್ಲಿ ಸೀಮಿತ ಓವರ್ ಕ್ರಿಕೆಟ್ ನ್ನು ಶ್ರೀಲಂಕಾದಲ್ಲಿ ಹಾಗೂ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ನಲ್ಲಿ ನಡೆಸುವ ಸಾಧ್ಯತೆಗಳಿವೆ ಎಂದು ಶಹರ್ಯಾರ್ ಖಾನ್ ತಿಳಿಸಿದ್ದಾರೆ.
ಇನ್ನು ಶಶಾಂಕ್ ಮನೋಹರ್ ಮತ್ತು ಶಹರ್ಯಾರ್ ಖಾನ್ ಅವರ ಸಭೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಗಿಲ್ಸ್ ಕ್ಲಾರ್ಕ್, ಭಾರತ ಮತ್ತು ಪಾಕಿಸ್ತಾನ ನಡುವಣ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ನಲ್ಲಿ ನಡೆಸುವ ಬಗ್ಗೆ ಪ್ರಸ್ತಾಪ ನೀಡಿದ್ದಾಗಿ ಪಿಸಿಬಿ ಮೂಲಗಳು ತಿಳಿಸಿವೆ. ಇತ್ತ, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಕುರಿತಂತೆ ಮಾಧ್ಯಮಗಳ ಮುಂದೆ ಅನಗತ್ಯ ಹೇಳಿಕೆ ನೀಡಬಾರದು ಎಂದು ತಿಳಿಸಿರುವುದಾಗಿ ಮಾಹಿತಿ ಬಂದಿದೆ.

ಒಪ್ಪಿಗೆಯ ನಿರೀಕ್ಷೆಯಲ್ಲಿ: ಏತನ್ಮಧ್ಯೆ, ಶ್ರೀಲಂಕಾದಲ್ಲಿ ಭಾರತ- ಪಾಕಿಸ್ತಾನ ಏಕದಿನ ಸರಣಿ ನಡೆಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಗೆಗೆ ಕಳುಹಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

SCROLL FOR NEXT