ಕ್ರೀಡೆ

ಭಾರತ ಕಿರಿಯರಿಗೆ ಹ್ಯಾಟ್ರಿಕ್ ಜಯ

Vishwanath S
ಜೋಹರ್ ಬಹ್ರು: ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದು ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ 21 ವರ್ಷದೊಳಗಿನ ಭಾರತ ಹಾಕಿ ತಂಡ ಸುಲ್ತಾನ್ ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ ಸತತ ಮೂರನೇ ಜಯ ಸಂಪಾದಿಸಿದೆ. 
ಗುರುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 2-1 ಗೋಲುಗಳ ಅಂತರದಲ್ಲಿ ಆತಿಥೇಯ ಮಲೇಷಿಯಾ ತಂಡವನ್ನು ಮಣಿಸಿತು. ಆ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿತು. ಭಾರತ ತಂಡದ ಪರ ಆಕರ್ಷಕ ಪ್ರದರ್ಶನ ನೀಡಿದ ಹರ್ಮನ್ ಪ್ರೀತ್ ಸಿಂಗ್ 41 ಮತ್ತು 56ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಗೆಲವು ತಂದುಕೊಟ್ಟರು.
ಇನ್ನು ಮಲೇಷಿಯಾ ತಂಡದ ಪರ ಶಹ್ರಿಲ್ ಶಾಬ 68ನೇ ನಿಮಿಷದಲ್ಲಿ ಏಕಾಂಗಿ ಗೋಲು ದಾಖಲಿಸಿದರು. ಭಾನುವಾರ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ, ಬುಧವಾರ ಅರ್ಜೆಂಟೀನಾ ವಿರುದ್ಧ ಗೆದ್ದಿದ್ದ ಭಾರತ, ಈ ಪಂದ್ಯದಲ್ಲೂ ಜಯಿಸಿ 9 ಅಂಕಗಳನ್ನು ಸಂಪಾದಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಆ ಮೂಲಕ ಗ್ರೇಟ್ ಬ್ರಿಟನ್ (8) ಮತ್ತು ಅರ್ಜೆಂಟೀನಾ (7) ತಂಡಗಳನ್ನು ಹಿಂದಿಕ್ಕಿತು. ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಪರಸ್ಪರ ಹೋರಾಟ ನಡೆಸಿದವು. ಹಾಗಾಗಿ ಪಂದ್ಯದ ಮೊದಲಾರ್ಧ ಮುಕ್ತಾಯದ ವೇಳೆ ಗೋಲುರಹಿತ ಸಮಬಲ ಕಂಡುಬಂದಿತು. ಆದರೆ ಪಂದ್ಯದ ದ್ವಿತೀಯಾರ್ಧದಲ್ಲಿ ಹರ್ಮನ್‍ಪ್ರೀತ್ ಸಿಂಗ್ ಅವರ ಚುರುಕಿನ ಆಟ ತಂಡಕ್ಕೆ ವಿಜಯ ತಂದುಕೊಟ್ಟಿತು.
SCROLL FOR NEXT