ಸಚಿನ್ ತೆಂಡೂಲ್ಕರ್ -ವಿರೇಂದರ್ ಸೆಹ್ವಾಗ್
ನವದೆಹಲಿ: 2007ರಲ್ಲೇ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಹೇಳಬೇಕೆಂದಿದ್ದೆ, ಆದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬೇಡ ಅಂದರು ಎಂದು ವಿರೇಂದರ್ ಸೆಹ್ವಾಗ್ ಹೇಳಿದ್ದಾರೆ.
ಅಕ್ಟೋಬರ್ 20ರಂದು, ಅಂದರೆ ತಮ್ಮ 37ನೇ ಹುಟ್ಟುಹಬ್ಬದ ದಿನವೇ ಸೆಹ್ವಾಗ್ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.
ಪ್ರತಿಯೊಬ್ಬ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್ನ ಉತ್ತುಂಗದಲ್ಲಿರುವಾಗಲೇ ನಿವೃತ್ತಿ ಘೋಷಿಸಬೇಕೆಂದು ಬಯಸುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಾ, ನಿವೃತ್ತಿ ಘೋಷಿಸಿ ವಿದಾಯ ಭಾಷಣ ಮಾಡಬೇಕೆಂದು ಬಯಸಿದ್ದೆ. ಆದರೆ ನನ್ನ ಹಣೆಬರಹದಲ್ಲಿ ಬೇರೆಯೇ ಬರೆದಿತ್ತು ಎಂದು ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಸೆಹ್ವಾಗ್ ಹೇಳಿದ್ದಾರೆ.
ಮಾರ್ಚ್ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಮ್ಯಾಚ್ನಂತರ ಸೆಹ್ವಾಗ್ನ್ನು ಟೀಂ ಇಂಡಿಯಾದಿಂದ ಕೈ ಬಿಡಲಾಗಿತ್ತು. ಅದರ ನಂತರ ಅವರಿಗೆ ಟೀಂನಲ್ಲಿ ಅವಕಾಶ ಸಿಗಲೇ ಇಲ್ಲ.
2013ರಲ್ಲಿ ನನ್ನನ್ನು ಟೀಂನಿಂದ ಕೈ ಬಿಟ್ಟಾಗ ಆಯ್ಕೆದಾರರು ನನ್ನ ಭವಿಷ್ಯದ ಯೋಜನೆ ಏನು? ಎಂದು ಕೇಳಲೇ ಇಲ್ಲ. ಅವರು ನನ್ನನ್ನು ಕೈ ಬಿಡುತ್ತಿದ್ದಾರೆ ಎಂದು ನನಗೆ ಮೊದಲೇ ಗೊತ್ತಾಗಿದ್ದರೆ ನಾನು ಆ ಸರಣಿ ಪಂದ್ಯದಲ್ಲೇ ನಿವೃತ್ತಿ ಘೋಷಿಸುತ್ತಿದ್ದೆ ಎಂದಿದ್ದಾರೆ ನಜಾಫ್ಗಡದ ನವಾಬ ಸೆಹ್ವಾಗ್.
ಆದಾಗ್ಯೂ, ಡಿಸೆಂಬರ್ 3 ರಿಂದ 7ರ ವರೆಗೆ ದೆಹಲಿಯಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಸೆಹ್ವಾಗ್ಗೆ ವಿದಾಯ ಕೂಟ ಏರ್ಪಡಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.