ಕ್ರೀಡೆ

2016 ರ ಎಚ್ಐಎಲ್ ಪಂದ್ಯಾವಳಿ ನಿಯಮ ಬದಲು

Srinivas Rao BV

ನವದೆಹಲಿ: ಮುಂದಿನ ವರ್ಷದ ಹಾಕಿ ಇಂಡಿಯಾ ಲೀಗ್(ಹೆಚ್ಐಎಲ್) ಪಂದ್ಯಾವಳಿಯ ನಿಯಮಾವಳಿಗಳನ್ನು ಆಮೂಲಾಗ್ರವಾಗಿ ಬದಲಿಸಲಾಗಿದ್ದು, ಟೂರ್ನಿಯನ್ನು ಮತ್ತಷ್ಟು ಸ್ಪರ್ಧಾತ್ಮಕ ಹಾಗೂ ಕಲಾತ್ಮಕವಾಗಿ ರೂಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಐಎಲ್ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.

ಫ್ರಾಂಚೈಸಿಗಳು ಹೊಂದುವ ಆಟಗಾರರ ಸಂಖ್ಯೆಯ ಮಿತಿಯನ್ನು ಇಳಿಸಲಾಗಿದ್ದು, ಪ್ರತಿಯೊಂದು ತಂಡದಲ್ಲಿ ಈವರೆಗಿದ್ದ 24 ಆಟಗಾರರ ಬದಲಿಗೆ 20 ಆಟಗಾರರು ಇರಲಿದ್ದಾರೆ. ಈ 20 ಆಟಗಾರರಲ್ಲಿ 12 ಸ್ಥಾನಗಳು ಭಾರತೀಯ ಆಟಗಾರರಿಗೆ ಮೀಸಲಿದ್ದು, ಉಳಿದ ಎಂಟು ಸ್ಥಾನಗಳಲ್ಲಿ ವಿದೇಶಿ ಆಟಗಾರರಿಗೆ ಅವಕಾಶವಿರುತ್ತದೆ.

ಪ್ರತಿಯೊಂದು ತಂಡದಲ್ಲಿ ಮೈದಾನಕ್ಕಿಳಿಯುವ ಗೋಲ್ ಕೀಪರ್ ಹೊರತಾಗಿ, ಇಬ್ಬರು ಗೋಲ್ ಕೀಪರ್ ಗಳನ್ನು ತಂಡದಲ್ಲಿ ಹೊಂದುವುದು ಕಡ್ಡಾಯ.

ಹೊಸ ನಿಯಮಗಳ ಪ್ರಕಾರ, ಮುಂದಿನ ಆವೃತ್ತಿಯಲ್ಲಿ ಒಂದು ಫೀಲ್ಡ್ ಗೋಲನ್ನು ಎರಡು ಗೋಲುಗಳನ್ನಾಗಿ ಪರಿವರ್ತಿಸಲಾಗುವುದು. ಇನ್ನು ಪ್ರತಿಯೊಂದು ಫಿಲ್ಡ್ ಗೋಲಿಗೆ ಎರಡು ಅಂಕಗಳನ್ನು ನೀಡಲು ಉದ್ದೇಶಿಸಲಾಗಿದೆ. ಆಟಗಾರರಲ್ಲಿ ಶಿಸ್ತು, ಸಂಯಮ ಮೂಡಿಸಲು ಪೆನಾಲ್ಟಿ ಕಾರ್ನರ್ ಹೊರತುಪಡಿಸಿ ಇನ್ನಿತರ ಪೆನಾಲ್ಟಿ ಸ್ಟ್ರೋಕ್ ಗೋಲ್ ಗೆ 2 ಅಂಕ ನೀಡಲಾಗುತ್ತದೆ. ಅಲ್ಲದೇ ಪೆನಾಲ್ಟಿ ಕಾರ್ನರ್ ನಡೆಸುವ ವೇಳೆ ಫೌಲ್ ಆದಲ್ಲಿ, ಅದನ್ನು ಪೆನಾಲ್ಟಿ ಸ್ಟ್ರೋಕ್ ಗೆ ಪರಿವರ್ತಿಸಲಾಗುತ್ತದೆ. ಈ ರೀತಿ ಪೆನಾಲ್ಟಿ ಸ್ಟ್ರೋಕ್ ನಿಂದ ಬರುವ ಗೋಲ್ ನ್ನೂ ಎರಡು ಗೋಲುಗಳೆಂದು ಪರಿಗಣಿಸಲಾಗುತ್ತದೆ ಎಂದು ಬಾತ್ರಾ ತಿಳಿಸಿದ್ದಾರೆ.

SCROLL FOR NEXT