ಮುಂಬೈ: ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ ಕೋಂ ಗುರುವಾರ ಸಮಾರಂಭವೊಂದರಲ್ಲಿ ಸಾವಿರಾರು ಪ್ರೇಕ್ಷಕರ ಮುಂದೆ ಕಣ್ಣೀರಾದರು. ಸರ್ಕಾರದ ಯೋಜನೆ, ಸನ್ಮಾನ ಹಾಗೂ ಗೌರವಾದರಣೆ ವಿಚಾರಗಳಲ್ಲಿ ವಲಯಾಧಾರಿತ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬುದು ಅವರ ಅಳಲಿಗೆ ಕಾರಣ.
ಇಲ್ಲಿನ ಖಾಸಗಿ ಕಂಪನಿಯ ಸಮಾರಂಭವೊಂದರಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಮಾಜಿ ಸ್ನೂಕರ್ ತಾರೆ ಗೀತ್ ಸೇಠಿ ಜತೆಗೆ ಮೇರಿ ಕೋಂ ಸಹ ಭಾಗಿಯಾಗಿದ್ದರು. ಭವ್ಯವಾಗಿ ಅಲಂಕೃತಗೊಂಡಿದ್ದ ವೇದಿಕೆ ಮೇಲೆ ಈ ಮೂವರೂ ಕ್ರೀಡಾ ತಾರೆಯರನ್ನು ಕೂಡಿಸಲಾಗಿತ್ತು. ಎಲ್ಲರೂ ತಂತಮ್ಮ ಸರದಿ ಬಂದಾಗ ತಮ್ಮ ಮನದ ಮಾತುಗಳಿಗೆ ದನಿಯಾದರು. ಅದೇ ವೇಳೆ, ಸರ್ಕಾರದಿಂದ ತಾವು ಅನುಭವಿಸಿದ ಕೆಲವೊಂದು ಮಾನಸಿಕ ಯಾತನೆಯನ್ನು ನೆನೆದು ಮೇರಿ ಕೋಂ ಕಣ್ಣೀರಿಟ್ಟರು. ``ಹರ್ಯಾಣ ಮೂಲದ ಬಾಕ್ಸರ್ ಪಿಂಕಿ ಜಂಗ್ರಾ ವಿರುದ್ಧ ತಾವು ಅತಿ ಹೆಚ್ಚು ಬಾರಿ ಗೆಲುವು ದಾಖಲಿಸುತ್ತಿದ್ದರೂ, ಆದ್ಯತೆ ವಿಚಾರಕ್ಕೆ ಬಂದಾಗ ಪಿಂಕಿಗೇ ಮಣೆ ಹಾಕಲಾಗುತ್ತದೆ. ಅಷ್ಟರಮಟ್ಟಿಗೆ, ಆಕೆಯ ಪರವಾಗಿ ಲಾಬಿ ನಡೆಯುತ್ತದೆ. ಆದರೆ, ನಾನು ಬೇರೆ ವಲಯದವಳಾಗಿದ್ದರಿಂದ ನನ್ನನ್ನು ಪದೇ ಪದೇ ಅವಮಾನಿಸಲಾಗುತ್ತಿದೆ'' ಎಂದು ಅವರು ಅಲವತ್ತುಕೊಂಡರು.
ಮೇರಿ ದುಃಖಕ್ಕೆ ಸ್ಪಂದಿಸಿದ ಪಿ.ವಿ. ಸಿಂಧು ಹಾಗೂ ಗೀತ್ ಸೇಠಿ ಅವರನ್ನು ಸಾಂತ್ವನಗೊಳಿಸಲೆತ್ನಿಸಿದರು. ಆದರೆ, ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಬೆರಳು ತೋರಿಸುವ ಮೂಲಕ, ಬಹು ಹಿಂದಿನಿಂದಲೂ ಕೇಳಿಬರುತ್ತಿರುವ ಈಶಾನ್ಯ ರಾಜ್ಯಗಳ ಪ್ರತಿಭೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಮಾತಿಗೆ ಮತ್ತೊಮ್ಮೆ ಮೇರಿ ಚಾಲ್ತಿ ನೀಡಿದರು. 2014ರಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಕಿದ್ದ ಭಾರತೀಯ ಕ್ರೀಡಾಳುಗಳ ತಂಡದ ಮುಂದಾಳತ್ವವನ್ನು ಮೇರಿ ಕೈಯಿಂದ ಕಿತ್ತು ಪಿಂಕಿಗೆ ನೀಡಿದ್ದು, ಆನಂತರ ಅದು ವಿವಾದವಾಗಿ ಮಾರ್ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.