ದುಬೈ: ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಿಂದ 2004ರ ಮಾಜಿ ಚಾಂಪಿಯನ್ ವೆಸ್ಟ್‍ಇಂಡೀಸ್ ತಂಡವನ್ನು ಹೊರದಬ್ಬಿರುವ ಬಾಂಗ್ಲಾದೇಶ 2017ರ ಪಂದ್ಯಾವಳಿಗೆ ಅರ್ಹತೆ ಗಿಟ್ಟಿಸಿದೆ.
ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ 2017ರ ಜೂನ್ 1ರಿಂದ 18ರವರೆಗೆ ಈ ಪಂದ್ಯಾವಳಿಯ ಆತಿಥ್ಯ ಹೊತ್ತಿದ್ದು, ಪ್ರಮುಖ ಸುತ್ತಿನಲ್ಲಿ ಒಟ್ಟು 8 ತಂಡಗಳು ಕಾದಾಟ ನಡೆಸಲಿವೆ. 2015ರ ಸೆಪ್ಟೆಂಬರ್ 30ರ ವೇಳೆಗೆ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಎಂಟು ಸ್ಥಾನ ಪಡೆದ ತಂಡಗಳನ್ನಷ್ಟೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಮಾನದಂಡವೆಂದು ನಿರ್ಧರಿಸಲಾಗಿತ್ತು.
2006ರಲ್ಲಿ ಭಾರತದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿ ಟೂರ್ನಿಯಲ್ಲಿ ಆಡಿದ್ದ ಬಾಂಗ್ಲಾದೇಶ ಈ ಬಾರಿ ಯಶಸ್ವಿಯಾಗಿ ಅಂಗ್ರ ಎಂಟು ಸ್ಥಾನದಲ್ಲಿ ಕಾಣಿಸಿಕೊಂಡು ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಂಡಿತು. ಟೂರ್ನಿಯಲ್ಲಿ ಭಾಗವಹಿಸಲಿರುವ 8 ತಂಡಗಳನ್ನು ತಲಾ ನಾಲ್ಕು ತಂಡಗಳಾಗಿ 2 ಗುಂಪಿನಲ್ಲಿ ವಿಂಗಡಿಸಲಾಗುವುದು. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯಲಿರುವ ತಂಡಗಳು ಸೆಮಿಫೈನಲ್‍ನಲ್ಲಿ ಕಾದಾಟ ನಡೆಸಲಿವೆ. ಕಳೆದ ಜೂನ್ ತಿಂಗಳಲ್ಲಿ ಬಾಂಗ್ಲಾದೇಶ ತಂಡ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಗೆದ್ದುಕೊಂಡ ನಂತರ ಬಾಂಗ್ಲಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಂಡಿತು.