ಹೈದರಾಬಾದ್: ರಿಯೊ ಒಲಿಂಪಿಕ್ಸ್ ಹಿನ್ನಲೆಯಲ್ಲಿ ಭಾರತ ಒಲಿಂಪಿಕ್ಸ್ ತಂಡಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ರಾಯಭಾರಿಯಾಗಿ ನೇಮಿಸಿರುವ ಬಗ್ಗೆ ತಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಐಪಿಎಲ್ ನಿಮಿತ ಹೈದರಾಬಾದ್ ನಲ್ಲಿ ಆರ್ ಸಿಬಿ ತಂಡದೊಂದಿಗೆ ಅಭ್ಯಾಸ ನಡೆಸುತ್ತಿರುವ ತಂಡದ ನಾಯಕ ವಿರಾಟ್ ಕೊಹ್ಲಿ ಕೊಹ್ಲಿ, ಭಾರತ ಒಲಿಂಪಿಕ್ಸ್ ತಂಡಕ್ಕೆ ಸಲ್ಮಾನ್ ಖಾನ್ ಅವರನ್ನು ರಾಯಭಾರಿಯನ್ನಾಗಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಪ್ರತಿಕ್ರಿಯೆ ನೀಡುವ ಸ್ಥಾನದಲ್ಲೂ ತಾನಿಲ್ಲ. ಹೀಗಾಗಿ ನನ್ನ ಪ್ರತಿಕ್ರಿಯೆ ಅನಗತ್ಯ ಎಂದು ಕೊಹ್ಲಿ ಹೇಳಿದ್ದಾರೆ.
"ನಾನು ಸಲ್ಮಾನ್ ಖಾನ್ ನೇಮಕದ ಬಗ್ಗೆ ಪ್ರತಿಕ್ರಿಯೆ ನೀಡುವ ಸ್ಥಾನದಲ್ಲಿಲ್ಲ. ಮೇಲಾಗಿ ನನ್ನ ಅಭಿಪ್ರಾಯಕ್ಕೆ ಮಹತ್ವವೂ ಇಲ್ಲ. ಸಾಕಷ್ಟು ಹಿರಿಯ ಕ್ರೀಡಾಪಟುಗಳು ತಮ್ಮ-ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ನನ್ನ ಅಭಿಪ್ರಾಯಕ್ಕೆ ಯಾವುದೇ ಮಹತ್ವ ಇಲ್ಲ. ಯಾರು ನೇಮಕ ಮಾಡಿದ್ದಾರೋ ಅವರಿಗೆ ಅದು ಸರಿಯೋ ತಪ್ಪೋ ಗೊತ್ತಿರುತ್ತದೆ. ಆದ್ದರಿಂದ ನಾನು ಅಭಿಪ್ರಾಯ ವ್ಯಕ್ತಪಡಿಸಿವುದಿಲ್ಲ ಎಂದು ಹೇಳುವುದಿಲ್ಲ. ಈ ಬಗ್ಗೆ ಬಹಳ ಜನರೇ ಅಭಿಪ್ರಾಯ ಹೇಳಿದ್ದಾರೆ. ನನ್ನ ಅಭಿಪ್ರಾಯದಿಂದ ಯಾವ ಬದಲಾವಣೆಯೂ ಆಗುವುದಿಲ್ಲ. ಅದರ ಬದಲು ನನ್ನ ಹೇಳಿಕೆಯನ್ನು ಮಸಾಲೆಯ ರೀತಿ ಮಾಧ್ಯಮಗಳಲ್ಲಿ ಬಳಸಿಕೊಳ್ಳಲಾಗುತ್ತದೆ"ಎಂದು ಕೊಹ್ಲಿ ಹೇಳಿದ್ದಾರೆ.