ಬ್ಯಾಂಕಾಕ್: ರಿಯೋ ಒಲಿಂಪಿಕ್ಸ್ ನಲ್ಲಿ ಥಾಲ್ಯಾಂಡ್ ವೇಟ್ ಲಿಫ್ಟರ್ ಸಿನ್ಪೆಟ್ ಕುರೈಥಾಂಗ್ ಕಂಚಿನ ಪದಕ ಗೆದ್ದ ಸಂಭ್ರಮಾಚರಣೆ ವೇಳೆ ಆತನ ಅಜ್ಜಿ ಮೃತಪಟ್ಟಿದ್ದಾರೆ.
84 ವರ್ಷದ ಸುಬೀನ್ ಎಂಬುವರು ಮೊಮ್ಮೆಗ 20 ವರ್ಷದ ಸಿಲ್ಪೆಟ್ 56 ಕೆಜಿ ವಿಭಾಗದಲ್ಲಿ ವೇಟ್ ಲಿಫ್ಟಿಂಗ್ ಪ್ರದರ್ಶನ ನೀಡುತ್ತಿದ್ದನ್ನು ಮನೆಯಲ್ಲಿ ಕುಳಿತು ವೀಕ್ಷಿಸುತ್ತಿದ್ದರು. ಈ ವೇಳೆ ಕಂಚಿನ ಪದಕ ಗೆದ್ದ ಸಂಭ್ರಮಾಚರಣೆಯಲ್ಲಿ ಕುಟುಂಬವರ್ಗ ತೊಡಗಿದ್ದಾಗ ಸುಬೀನ್ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಸುಬೀನ್ ಕುಸಿದು ಬೀಳುತ್ತಿದ್ದಂತೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಅಷ್ಟರಲ್ಲಾಗಲೇ ಸುಬೀನ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಮ್ಮಗನ ಸಾಧನೆಯಿಂದ ಅತೀ ಖುಷಿಗೆ ಒಳಗಾಗಿ ಆಕೆ ಮೃತಪಟ್ಟಿದ್ದಾರಾ ಅಥವಾ ಮೊದಲು ಅನಾರೋಗ್ಯದಿಂದ ಬಳಲುತ್ತಿದ್ದರಾ ಎಂಬುದು ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಿನ್ಪೆಟ್ ಸದ್ಯ ರಿಯೋ ಒಲಿಂಪಿಕ್ಸ್ ನಲ್ಲಿ ಥಾಲ್ಯಾಂಡ್ ಪರ ಪದಕ ಗೆದ್ದ ಎರಡನೇ ಕ್ರೀಡಾಪಟುವಾಗಿದ್ದಾರೆ. ಇದಕ್ಕೂ ಮುನ್ನ ವೇಟ್ ಲಿಫ್ಟಿಂಗ್ 48 ಕೆಜಿ ಮಹಿಳಾ ವಿಭಾಗದಲ್ಲಿ ಸೋಪಿತ ತನಸನ್ ಎಂಬುವರು ಚಿನ್ನದ ಪದಕ ಗೆದ್ದಿದ್ದರು.