ರಿಯೋ ಡಿ ಜನೈರೋ: ಹಾಲಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ 100 ಮೀ. ಓಟದ ಫೈನಲ್ ಹಣಾಹಣಿಯಲ್ಲಿ ಮೊದಲಿಗರಾಗಿ ಗುರಿ ತಲುಪುವ ಮೂಲಕ ಮತ್ತೆ ಚಿನ್ನದ ಪದಕ ಬಾಚಿದ್ದು, ಈ ಮೂಲಕ ಸತತ ಮೂರು ಒಲಿಂಪಿಕ್ನಲ್ಲಿ ಬಂಗಾರದ ಪದಕ ಗೆದ್ದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಸೋಮವಾರ ಬೆಳಗ್ಗೆ ರಿಯೋ ಡಿ ಜನೈರೋದಲ್ಲಿ ನಡೆದ 100 ಮೀ ಓಟದ ಫೈನಲ್ ಪಂದ್ಯದಲ್ಲಿ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಕೇವಲ 9.81 ಸೆಕೆಂಡ್ ನಲ್ಲಿ ಗುರಿ ತಲುಪಿ ತಮ್ಮದೇ ಈ ಹಿಂದಿನ ಸಾಧನೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಬೋಲ್ಟ್ ಗೆ ತೀವ್ರ ಪೈಪೋಟಿ ನೀಡಿದ ಅವರ ಸಾಂಪ್ರದಾಯಿಕ ಎದುರಾಳಿ ಅಮೆರಿಕದ ಜಸ್ಟಿನ್ ಗಾಟ್ಲಿನ್ 9.84 ಸೆಕೆಂಡ್ ನಲ್ಲಿ ಗುರಿ ತಲುಪಿ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು ಕೆನಡಾದ ಆಂಡ್ರೆ ಡೆ ಗ್ರಾಸೆ 9.91 ಸೆಕೆಂಡ್ ನಲ್ಲಿ ಗುರಿ ತಲುಪಿ, ಕಂಚಿನ ಪದಕ ಜಯಿಸಿದರು.
ಮೂರನೇ ಬಾರಿಗೆ ಮೂರು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಬೋಲ್ಟ್
ಇನ್ನು ಈ ಹಿಂದೆ 100 ಮತ್ತು 200 ಮೀಟರ್ ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಬೋಲ್ಟ್ ಲಂಡನ್ ಹಾಗೂ ಬೀಜಿಂಗ್ ಒಲಿಂಪಿಕ್ನಲ್ಲಿ ತಲಾ ಮೂರು ಸ್ವರ್ಣ ಪದಕ ಜಯಿಸಿದ್ದರು. ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ರಸಕ್ತ ಒಲಿಂಪಿಕ್ನಲ್ಲಿಯೂ ಸಹ ಮೂರು ಚಿನ್ನದ ಪದಕ ಗೆಲ್ಲುವ ಮೂಲಕ ಟ್ರಿಪಲ್ ಸಾಧನೆಯ ಭರವಸೆಯಲ್ಲಿದ್ದಾರೆ. ಬೋಲ್ಟ್ ಈಗಾಗಲೇ 100 ಮೀ ಓಟದಲ್ಲಿ ಚಿನ್ನ ಬೇಟೆಯಾಡಿದ್ದು, ಉಳಿದಿರುವ 200 ಮೀ ಹಾಗೂ 4*100 ಮೀಟರ್ ಓಟದಲ್ಲಿಯೂ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.