ಕ್ರೀಡೆ

ಗೋಪಿ ಸರ್ ಅವರೇ ಬೆಸ್ಟ್ ಕೋಚ್: ಪಿವಿ ಸಿಂಧು

Sumana Upadhyaya
ಹೈದರಾಬಾದ್: ರಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ದೇಶದ ಗಮನ ಸೆಳೆದಿರುವ ಖ್ಯಾತ ಶಟ್ಲರ್ ಪಿ.ವಿ.ಸಿಂಧು, ತೆಲಂಗಾಣ ಉಪ ಮುಖ್ಯಮಂತ್ರಿ ಮೊಹಮ್ಮದ್ ಮಹಮ್ಮೂದ್ ಅಲಿಯವರ ಉತ್ತಮ ಕೋಚ್ ನೇಮಕ ಮಾಡುವುದಾಗಿ ನೀಡಿರುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ತಮ್ಮ ಈಗಿನ ಕೋಚ್ ಪುಲ್ಲೇಲ ಗೋಪಿಚಂದ್ ಉತ್ತಮ ಕೋಚ್ ಎಂದು ಸಿಂಧು ಹೇಳಿದ್ದಾರೆ.
''ನನಗೆ ಗೋಪಿ ಸರ್ ಅವರು ಉತ್ತಮ ಕೋಚ್ ಎನಿಸುತ್ತಿದೆ. ನಾನು 10 ವರ್ಷದವಳಾಗಿದ್ದಾಗಿನಿಂದಲೇ ಅವರ ಬಳಿ ತರಬೇತಿ ಪಡೆಯುತ್ತಿದ್ದೇನೆ. ಸಚಿವರ ಹೇಳಿಕೆಗೆ ನಾನು ಏನೂ ಹೇಳುವುದಿಲ್ಲ ಎಂದು ಸಿಂಧು ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
21 ವರ್ಷದ ಸಿಂಧೂ ಅವರಿಗೆ ಇನ್ನೂ ಉತ್ತಮ ಕೋಚ್ ನ್ನು ಒದಗಿಸಿದರೆ ಮುಂದಿನ ಟೋಕ್ಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಬಹುದು ಎಂದು ತೆಲಂಗಾಣ ಉಪ ಮುಖ್ಯಮಂತ್ರಿ ಮೊನ್ನೆ ನೀಡಿದ್ದ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಸಿಂಧು ಈ ಪ್ರತಿಕ್ರಿಯೆ ನೀಡಿದ್ದಾರೆ.
ರಿಯೊ ಒಲಿಂಪಿಕ್ಸ್ ನಿಂದ ಬೆಳ್ಳಿ ಪದಕ ಗಳಿಸಿ ಹುಟ್ಟೂರಿಗೆ ಮರಳಿದ್ದ ಪಿ.ವಿ.ಸಿಂಧುಗೆ ಮೊನ್ನೆ ಸೋಮವಾರ ಅದ್ದೂರಿ ಸ್ವಾಗತ ಸಿಕ್ಕಿತ್ತು. ತೆಲಂಗಾಣ ಸರ್ಕಾರ ಅವರನ್ನು ಭವ್ಯವಾಗಿ ಸನ್ಮಾನಿಸಿತ್ತು. 
ಭಾರತ ದೇಶದ ಉತ್ತಮ ಶಟ್ಲರ್ ಎಂದು ಗುರುತಿಸಲ್ಪಟ್ಟಿರುವ ಪುಲ್ಲೇಲ ಗೋಪಿಚಂದ್, ಉನ್ನತ ದರ್ಜೆಯ ಬ್ಯಾಡ್ಮಿಂಟನ್ ಆಟಗಾರರನ್ನು ಹುಟ್ಟುಹಾಕಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದ ಸೈನಾ ನೆಹ್ವಾಲ್, ಈ ವರ್ಷದ ಪುರುಷರ ಸಿಂಗಲ್ಸ್ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಗೆ ಹೋಗಿದ್ದ ಕೆ.ಶ್ರೀಕಾಂತ್ ಅವರ ಗರಡಿಯಲ್ಲಿಯೇ ಪಳಗಿದವರು.
ಅಂತಿಮ ಹಂತದ ಚಿನ್ನದ ಪದಕ ಬೇಟೆಯ ಆರಂಭಿಕ ಪಂದ್ಯದಲ್ಲಿ ಉತ್ಸಾಹದಿಂದ ಪ್ರದರ್ಶನ ನೀಡಿದ್ದರೂ ಕೂಡ ಸಿಂಧು ಸ್ಪೈನ್ ನ ಕ್ಯಾರೊಲಿನಾ ಮರಿನ್ ಅವರ ಎದುರು 21-19, 12-21, 15-21 ಅಂತರಗಳಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.
ಕರ್ಣಂ ಮಲ್ಲೇಶ್ವರಿ, ಮೇರಿ ಕೊಮ್, ಸೈನಾ ನೆಹ್ವಾಲ್ ಮತ್ತು ಸಾಕ್ಷಿ ಮಲಿಕ್ ನಂತರ ಹೈದರಾಬಾದಿನ ಪಿ.ವಿ.ಸಿಂಧು ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಐದನೆ ಮಹಿಳೆಯಾಗಿದ್ದಾರೆ.
SCROLL FOR NEXT