ಕ್ರೀಡೆ

ಚೆಸ್ ನಲ್ಲಿ ಮುಂದುವರೆದ ಅಧಿಪತ್ಯ; ಮ್ಯಾಗ್ನಸ್ ಕಾರ್ಲ್ ಸನ್ ಗೆ ಹ್ಯಾಟ್ರಿಕ್ ಗರಿ

Srinivasamurthy VN

ನ್ಯೂಯಾರ್ಕ್: ವಿಶ್ವ ಚೆಸ್ ಕ್ರೀಡೆಯಲ್ಲಿ ನಾರ್ವೆ ಆಟಗಾರ ಮ್ಯಾಗ್ನಸ್ ಕಾರ್ಲ್ ಸನ್ ಅವರ ಅಧಿಪತ್ಯ ಮುಂದುವರೆದಿದ್ದು, ವಿಶ್ವ ಚೆಸ್‌ ಚಾಂಪಿಯನ್‌ ಶಿಪ್ ನಲ್ಲಿ  ಕಾರ್ಲ್‌ಸನ್‌ ಸತತ ಮೂರನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.

ವಿಶ್ವ ಚೆಸ್ ಚಾಂಪಿಯನ್ ಶಿಪ್ ನಿಮಿತ್ತ ನ್ಯೂಯಾರ್ಕ್ ನಲ್ಲಿ ನಡೆದ ನಾಲ್ಕು ಪಂದ್ಯಗಳ ರ್ಯಾಪಿಡ್ ಪ್ಲೇಆಫ್ ನಲ್ಲಿ ರಷ್ಯಾದ ಸರ್ಜೆಯ್ ಕರ್ಜಾಕಿನ್‌ ವಿರುದ್ಧ ಗೆಲುವು ಸಾಧಿಸಿದ ಕಾರ್ಲ್ ಸನ್ ಪ್ರಶಸ್ತಿಗೆ ಭಾಜನರಾದರು. ಪ್ಲೇ ಆಫ್‌ನ  ಮೊದಲ ಮತ್ತು ಮೂರನೇ ಸುತ್ತು ಡ್ರಾದಲ್ಲಿ ಅಂತ್ಯ ಕಂಡಿದ್ದವಾದರೂ, ಎರಡನೇ ಹಾಗೂ ನಾಲ್ಕನೇ ಸುತ್ತಿನ ಹೋರಾಟದಲ್ಲಿ ತಮ್ಮ ಚುರುಕಿನ ನಡೆ ಮೂಲಕ ಕಾರ್ಲ್ ಸನ್ ಎದುರಾಳಿ ಆಟಗಾರನ ಕಂಗೆಡಿಸಿದ್ದರು. ಆ ಮೂಲಕ  ಟೈಬ್ರೇಕರ್ ನಲ್ಲಿ ಕಾರ್ಲ್ ಸನ್ ರಷ್ಯಾದ ಕರ್ಜಾಕಿನ್‌ ಅವರನ್ನು ಮಣಿಸಿ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆದರು.

ಕಾರ್ಲ್ ಸನ್ ಗೆ ಹ್ಯಾಟ್ರಿಕ್ ಜಯ
ಚೆಸ್ ಜಗತ್ತಿನ ಅತಿ ಕಿರಿಯ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕಾರ್ಲ್ ಸನ್ ಗೆ ಈ ಬಾರಿ ಚಾಂಪಿಯನ್ ಶಿಪ್ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಅವರು 2013 ಮತ್ತು 2014ರಲ್ಲಿ  ಭಾರತದ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸಿ ಚಾಂಪಿಯನ್ ಪಟ್ಟ ಪಡೆದಿದ್ದರು.

SCROLL FOR NEXT