ಲಖನೌ: ವಿಶ್ವ ಜೂನಿಯರ್ ಬಾಕಿ ಟೂರ್ನಿಯಲ್ಲಿ ಸಂಘಟಿತ ಹೋರಾಟ ತೋರಿದ ಭಾರತ ಕಿರಿಯರ ತಂಡ ಸತತ 16 ವರ್ಷಗಳ ಬಳಿಕ ಫೈನಲ್ ಗೇರಿದೆ.
ಉತ್ತರ ಪ್ರದೇಶದ ಲಖನೌನ ಮೇಜರ್ ಧ್ಯಾನ್ಚಂದ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನನ್ನು 4-2 ಅಂತರದಿಂದ ಬಗ್ಗುಬಡಿದ ಭಾರತ ತಂಡ ಫೈನಲ್ ಪ್ರವೇಶಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಭಾರತ ತಂಡದ ಪರ ಗೋಲ್ ಕೀಪರ್ ವಿಕಾಸ್ ದಹಿಯಾ ಅಮೋಘ ಪ್ರದರ್ಶನ ನೀಡಿದರು. ಅಂತೆಯೇ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕೂಡ ಸಂಘಟಿತ ಪ್ರದರ್ಶನ ನೀಡುವುದರೊಂದಿಗೆ ನಿಗದಿತ ಸಮಯದಲ್ಲಿ ಉಭಯ ತಂಡಗಳು 2-2 ಗೋಲುಗಳ ಅಂತರದಲ್ಲಿ ಸಮಬಲ ಸಾಧಿಸಿದ್ದವು.
ಹೀಗಾಗಿ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು. ತವರು ಅಭಿಮಾನಿಗಳ ಭರ್ಜರಿ ಬೆಂಬಲ ಹಾಗೂ ಕಠಿಣ ಅಭ್ಯಾಸ ನಡೆಸಿದ್ದ ಹರ್ಜೀತ್ ಸಿಂಗ್ ಪಡೆ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಪ್ರಬಲ ಪೈಪೋಟಿ ನೀಡಿತ್ತು. ಕ್ವಾರ್ಟರ್ ಫೈನಲ್ ನಲ್ಲಿ ಬಲಿಷ್ಠ ಸ್ಪೇನ್ ತಂಡವನ್ನು ಮಣಿಸಿದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ಮೊದಲಾರ್ಧದಲ್ಲಿ ಚುರುಕಿನ ಆಟವಾಡಲಿಲ್ಲ. ಭಾರತ 14ನೇ ನಿಮಿಷದಲ್ಲೇ ಆಸೀಸ್ಗೆ ಗೋಲು ಬಿಟ್ಟುಕೊಟ್ಟು ಹಿನ್ನಡೆ ಅನುಭವಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಎಚ್ಚೆತ್ತುಕೊಂಡ ಭಾರತದ ಪರ ಗುಜ್ರಾಂತ್ ಸಿಂಗ್ (42ನೇ ನಿಮಿಷ) ಮತ್ತು ಮಂದೀಪ್ ಸಿಂಗ್ (46ನೇ ನಿಮಿಷ) ಮೂಲಕ ಆಕರ್ಷಕ ಫೀಲ್ಡ್ ಗೋಲು ಸಿಡಿಸಿ ಆಸೀಸ್ಗೆ ತಿರುಗೇಟು ನೀಡಿದರು. ಬಳಿಕ ಹತ್ತು ನಿಮಿಷ ಉಭಯ ತಂಡದಿಂದ ಪ್ರಬಲ ಪೈಪೋಟಿ ಮೂಡಿಬಂದಿತು. ಆದರೆ 57ನೇ ನಿಮಿಷದಲ್ಲಿ ಭಾರತದ ಗೋಲ್ ಕೀಪರ್ ವಿಕಾಸ್ ಅವರ ದುರ್ಬಲ ತಡೆಯಿಂದ ಆಸ್ಟ್ರೇಲಿಯಾ ತಂಡ ಶಾರ್ಪ್ ಲಚ್ ಲಾನ್ ಮೂಲಕ ಫೀಲ್ಡ್ ಗೋಲು ದಾಖಲಿಸಿತು. ಆ ಮೂಲಕ ಪಂದ್ಯದ ಅವಧಿ ಮುಕ್ತಾಯದ ವೇಳೆಗೆ ಉಭಯ ತಂಡಗಳ ಗಳಿಕೆ 2-2ರಿಂದ ಸಮಬಲ ಕಂಡಿತು.
ಪೆನಾಲ್ಟಿ ಶೂಟೌಟ್ ನಲ್ಲಿ ವಿಕಾಸ್ ದಹಿಯಾ ಅಮೋಘ ಪ್ರದರ್ಶನ
ಇನ್ನು ಫಲಿತಾಂಶಕ್ಕಾಗಿ ನಡೆದ ಪೆನಾಲ್ಟಿ ಶೂಟೌಟ್ ಭಾರತದ ವಿಕಾಸ್ ದಹಿಯಾ ಅಮೋಘ ಪ್ರದರ್ಶನ ನೀಡಿದರು. ಪೆನಾಲ್ಟಿ ಶೂಟೌಟ್ ಗೂ ಮೊದಲು ನಡೆದ ಪೂರ್ಣಾವಧಿ ವೇಳೆ ಆಸಿಸ್ ತಂಡಕ್ಕೆ ವಿನಾಕಾರಣ ಗೋಲು ಬಿಟ್ಟುಕೊಟ್ಟು ತಂಡದ ಹಿನ್ನಡೆಗೆ ಕಾರಣರಾಗಿದ್ದ ವಿಕಾಸ್ ದಹಿಯಾ ಶೂಟೌಟ್ ನಲ್ಲಿ ಮಿಂಚಿನ ಪ್ರದರ್ಶನ ನೀಡಿದರು. ಶೂಟೌಟ್ನಲ್ಲಿ ಮೊದಲ ಅವಕಾಶದಲ್ಲಿ ಆಸೀಸ್ ಗೋಲು ಬಾರಿಸಿದರೆ, ಬಳಿಕ ಭಾರತಕ್ಕೆ ಹರ್ಜಿತ್ ಸಿಂಗ್ 1-1 ಸಮಬಲ ತಂದರು. ಆದರೆ 2ನೇ ಅವಕಾಶದಲ್ಲಿ ಆಸೀಸ್ನ ಮ್ಯಾಥ್ಯೂ ಬರ್ಡ್ ಬಾರಿಸಿ ಗೋಲನ್ನು ವಿಕಾಸ್ ಆಕರ್ಷಕವಾಗಿ ತಡೆದರು. ಬೆನ್ನಲ್ಲೇ ಭಾರತಕ್ಕೆ ಹರ್ಮನ್ಪ್ರೀತ್ ಸಿಂಗ್ ಗೋಲು ತಂದಿತ್ತರೆ, ಆಸೀಸ್ನ 3ನೇ ಅವಕಾಶಕ್ಕೂ ವಿಕಾಸ್ ತಡೆಯಾಗಿ ಬಹುತೇಕ ಜಯ ಖಚಿತಪಡಿಸಿದರು. 4ನೇ ಅವಕಾಶದಲ್ಲಿ ಆಸೀಸ್ ಗೋಲು ಬಾರಿಸಿ ಅಂತರವನ್ನು 2-3ಕ್ಕೆ ಇಳಿಸಿದರೂ, ಬೆನ್ನಲ್ಲೇ ಮನ್ಪ್ರೀತ್ ಎದುರಾಳಿ ಗೋಲ್ ಕೀಪರ್ ಆಶ್ಲೇಗ್ ಥಾಮಸ್ರ ಕಣ್ತಪ್ಪಿಸಿ ದಾಖಲಿಸಿದ ಗೋಲಿನೊಂದಿಗೆ ಭಾರತ ಜಯ ದಾಖಲಿಸಿ ಸಂಭ್ರಮಿಸಿತು.
ಆ ಮೂಲಕ ಸತತ 15 ವರ್ಷಗಳ ಬಳಿಕ ಭಾರತ ಕಿರಿಯರ ತಂಡ ಫೈನಲ್ ಪ್ರವೇಶಿಸಿದ್ದು, ನಾಳೆ ನಡೆಯಲಿರುವ ಫೈನಲ್ ನಲ್ಲಿ ಬಲಿಷ್ಟ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.