ಬೆಲ್‌ಗ್ರೇಡ್: ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸರ್ಬಿಯಾದ ಟೆನಿಸ್ ತಾರೆ ಅನಾ ಇವಾನೊವಿಚ್ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಅನಾ ಇನಾನೊವಿಚ್ ಗ್ರ್ಯಾನ್‌ಸ್ಲಾಮ್ ಗೆದ್ದ ಸರ್ಜಿಯಾದ ಪ್ರಪ್ರಥಮ ಮಹಿಳಾ ಆಟಗಾರ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 2008ರ ಫ್ರೆಂಚ್ ಓಪನ್ ಚಾಂಪಿಯನ್ ಟೂರ್ನಿಯಲ್ಲಿ ರಷ್ಯಾದ ದಿನಾರಾ ಸಫಿನ್ ವಿರುದ್ಧ ಅನಾ 6-4, 6-3 ಅಂತರದ ಗೆಲುವು ಸಾಧಿಸಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು.
ಉನ್ನತ ದರ್ಜೆಯ ಸ್ಪರ್ಧೆಗಳಲ್ಲಿ ಆಡಲು ತನ್ನ ದೇಹ ಈಗ ಸ್ಪಂದಿಸದಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ಅನಾ ಇನಾನೊವಿಚ್ ಹೇಳಿದ್ದಾರೆ. ಬೇರೆ ಮಾರ್ಗವೇ ಇಲ್ಲ, ನನ್ನ ವೃತ್ತಿಪರ ಟೆನಿಸ್ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ. ಇದೊಂದು ಅತ್ಯಂತ ಕಠಿಣ ನಿರ್ಧಾರ. ಟೆನಿಸ್ ವೃತ್ತಿ ಜೀವನದಲ್ಲಿ ನಾನು ಸಂತಸದ ಕ್ಷಣಗಳು ಅನುಭವಿಸಿದ್ದೇನೆ ಇಷ್ಟು ಸಾಕು ಎಂದು ಹೇಳಿದ್ದಾರೆ.