ಮುಂಬೈ: ಮುಂಬರುವ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಸರಣಿಗಾಗಿ ಇದೇ ಫೆಬ್ರವರಿ 5ರಂದು ತಂಡ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ.
ಇದೇ ಫೆಬ್ರವರಿ 24ರಿಂದ ಮಾರ್ಚ್ 6 ವರಗೆ ನಡೆಯುವ ಏಷ್ಯಾ ಕಪ್ ಮತ್ತು ಮಾರ್ಚ್ 18 ರಿಂದ ನಡೆಯಲಿರುವ ಟಿ-20 ವಿಶ್ವಕಪ್ ಸರಣಿಗೆ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಫೆಬ್ರವರಿ 5, ಶುಕ್ರವಾರ ದೆಹಲಿಯಲ್ಲಿ ತಂಡವನ್ನು ಆಯ್ಕೆ ಮಾಡಲಾಗುತ್ತದೆ.
ಫೆಬ್ರವರಿ 24ರಿಂದ ಮಾರ್ಚ್ 6 ವರಗೆ ನಡೆಯುವ ಏಷ್ಯಾ ಕಪ್ ಟೂರ್ನಿಯನ್ನು ಇದೇ ಮೊದಲ ಬಾರಿಗೆ ಏಕದಿನ ಟೂರ್ನಿಯಿಂದ ಟಿ-20 ಮಾದರಿಗೆ ಬದಲು ಮಾಡಲಾಗಿದೆ. ಈ ಹಿಂದೆ ಏಷ್ಯಾಕಪ್ ಟೂರ್ನಿಯನ್ನು 50 ಓವರ್ ಗಳ ಏಕದಿನ ಮಾದರಿಯಲ್ಲಿ ಆಯೋಜಿಸಲಾಗುತ್ತಿತ್ತು. ಈ ನಡುವೆ ತವರು ನೆಲದಲ್ಲಿ ಭಾರತ ಕ್ರಿಕೆಟ್ ತಂಡ 3 ಪಂದ್ಯಗಳ ಟಿ-20 ಸರಣಿ ಕೂಡ ಆಡಲಿದೆ.
ಟಿ-20 ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡಗಳಲ್ಲಿ ಭಾರತ ಪ್ರಮುಖ ತಂಡವಾಗಿದ್ದು, ಇದೇ ಕಾರಣಕ್ಕೆ ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಸಿದ್ಧ ಪಡಿಸುವ ಹೊಣೆ ಆಯ್ಕೆಗಾರರ ಮೇಲಿದೆ. ಹೀಗಾಗಿ ಟಿ20 ವಿಶ್ವಕಪ್ ಗೂ ಮೊದಲು ಬರುವ ಸರಣಿಗಳಲ್ಲಿ ಆಟಗಾರರ ಫಿಟ್ ನೆಸ್ ಹಾಗೂ ಫಾರ್ಮ್ ಪರೀಕ್ಷೆಗೆ ಏಷ್ಯಾಕಪ್ ಟೂರ್ನಿ ಮತ್ತು ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಬಳಕೆ ಮಾಡಿಕೊಳ್ಳಲು ಆಯ್ಕೆಗಾರರು ಸಿದ್ಧತೆ ನಡೆಸಿದ್ದಾರೆ.
ಇನ್ನು ಭಾವಿ ನಾಯಕ ವಿರಾಟ್ ಕೊಹ್ಲಿ ಪಾಲಿಗೂ ಈ ಸರಣಿಗಳು ಮಹತ್ವವಾಗಿದ್ದು, ಆಸ್ಟ್ರೇಲಿಯಾ ವಿರುದ್ಧ ಉತ್ತಮ ಆಟವಾಡಿದ್ದ ಕೊಹ್ಲಿ ಅದೇ ಫಾರ್ಮ್ ಅನ್ನು ಏಷ್ಯಾಕಪ್ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಮುಂದುವರೆಸುವ ಭರವಸೆ ಹೊಂದಿದ್ದಾರೆ. ಇನ್ನು ತಂಡಕ್ಕೆ ಯುವರಾಜ್ ಸಿಂಗ್ ವಾಪಸ್ ಆಗಿರುವುದು ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಒಟ್ಟಾರೆ ಟಿ20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡಿರುವ ಆಯ್ಕೆ ಸಮಿತಿ ಎಂತಹ ತಂಡವನ್ನು ಪ್ರಕಟಿಸಲಿದೆ ಎನ್ನುವುದು ಕ್ರೀಡಾಸಕ್ತರ ಕುತೂಹಲಕ್ಕೆ ಕಾರಣವಾಗಿದೆ.